370ನೆ ವಿಧಿ ರದ್ದು: ಎಡಪಕ್ಷಗಳಿಂದ ಪ್ರತಿಭಟನೆ
ಹೊಸದಿಲ್ಲಿ, ಆ. 5: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಧಿ 370ನ್ನು ರದ್ದುಗೊಳಿಸಿರುವು ದನ್ನು ವಿರೋಧಿಸಿ ಎಡಪಕ್ಷಗಳು ಇಲ್ಲಿನ ಜಂತರ್-ಮಂತರ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಕೇಂದ್ರ ಸರಕಾರ ಸೋಮವಾರ ರದ್ದುಗೊಳಿಸಿತು ಹಾಗೂ ಜಮ್ಮುಕಾಶ್ಮೀರವನ್ನು ಜಮ್ಮ ಹಾಗೂ ಲಡಾಕ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತು. ಪ್ರತಿಭಟನೆಯಲ್ಲಿ ಎಡಪಕ್ಷದ ನಾಯಕರಾದ ಸೀತಾರಾಮ ಯೆಚೂರಿ, ಪ್ರಕಾಶ್ ಕಾರಟ್, ಡಿ. ರಾಜಾ, ದೀಪಂಕರ್ ಭಟ್ಟಾಚಾರ್ಯ ಹಾಗೂ ಇತರರು ಪಾಲ್ಗೊಂಡರು. ಪ್ರತಿಭಟನಕಾರರು ಸಂಸತ್ತಿಗೆ ಪ್ರತಿಭಟನ ರ್ಯಾಲಿ ನಡೆಸಿದರು. ಈ ಸಂದರ್ಭ ಪೊಲೀಸರು ಅವರನ್ನು ತಡೆದರು. ಪ್ರತಿಭಟನಕಾರರು ಮೋದಿ ಸರಕಾರದ ಪ್ರತಿಕೃತಿ ದಹಿಸಿದರು. ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂಭವಿಸಿರುವುದು ಪ್ರಜಾಪ್ರಭುತ್ವವನ್ನು ರದ್ದುಗೊಳಿಸಿರುವುದು ಮಾತ್ರವಲ್ಲ, ಅದು ಭಾರತದ ಸಂವಿಧಾನದ ಮೇಲಿನ ದಾಳಿ ಕೂಡ ಹೌದು ಎಂದು ಬೃಂದಾ ಕಾರಟ್ ಹೇಳಿದರು. ಕೇಂದ್ರದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಜಾ, ದೇಶದ ಫ್ಯಾಸಿಸ್ಟ್ ಆಡಳಿತಕ್ಕೆ ಒಳಪಟ್ಟಿದೆ ಎಂದು ಆರೋಪಿಸಿದರು.