ಸ್ವಾವಲಂಬಿಗಳಾಗಿ ಬದುಕಿ ಸಮಾಜಕ್ಕೆ ಮಾದರಿಯಾಗಿ: ಯು.ಟಿ.ಖಾದರ್

Update: 2019-08-06 12:26 GMT

ಮಂಗಳೂರು, ಆ. 6: ನಮ್ಮಲ್ಲೇನೂ ಇಲ್ಲ, ನಮ್ಮ ಕಷ್ಟ ಎಂದಿಗೂ ಮುಗಿಯದು, ಸಮಸ್ಯೆಗೆ ಪರಿಹಾರವೂ ಸಿಗದು ಎಂದು ಕೊರಗದೆ ಮುಸ್ಲಿಂ ಮಹಿಳೆಯರು ಸ್ವಾಲಂಬಿಗಳಾಗಿ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವರ್ಣ ಮಹೋತ್ಸವದ ಅಂಗವಾಗಿ ನಗರದ ಮಿನಿಪುರಭವನದಲ್ಲಿ ಮಂಗಳವಾರ ಜರುಗಿದ ದ.ಕ. ಮತ್ತು ಉಡುಪಿ ಜಿಲ್ಲೆಯ 70 ಮಂದಿ ಅರ್ಹ ಮುಸ್ಲಿಂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಸ್ಯೆ ಇಲ್ಲದ ವ್ಯಕ್ತಿ ಇಲ್ಲ, ಮನೆಯೂ ಇಲ್ಲ, ಊರೂ ಇಲ್ಲ. ಸಮಸ್ಯೆ ಎಲ್ಲೆಡೆ ಇದೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೇ ವಿನಃ ಕೊರಗಿ ಬದುಕಿನಲ್ಲಿ ಜಿಗುಪ್ಸೆಗೊಳಗಾಗಬಾರದು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯಾಚರಿಸುವ ಸೆಂಟ್ರಲ್ ಕಮಿಟಿಯು ಅರ್ಹ ಮುಸ್ಲಿಂ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸುತ್ತಿರುವುದು ಶ್ಲಾಘನೀಯ. ಇದರ ಪ್ರಯೋಜನ ಪಡೆದವರು ಬದುಕಿನಲ್ಲಿ ತಾನೂ ಸ್ವಾವಲಂಬಿಯಾಗುವುದರ ಜೊತೆಗೆ ಇತರರಿಗೂ ಉದ್ಯೋಗ ನೀಡಲು ಮನಸ್ಸು ಮಾಡಬೇಕು ಎಂದರು.

ಒಂದೇ ಕಡೆ ನಾಲ್ಕೈದು ಹೊಲಿಗೆ ಯಂತ್ರದ ವ್ಯವಸ್ಥೆ ಕಲ್ಪಿಸಿ ಅಲ್ಲಿಗೆ ಬಂದು ಟೈಲರಿಂಗ್ ಮಾಡುವ ಮತ್ತು ಮಹಿಳೆಯರು ಸಿದ್ಧಪಡಿಸಿದ ಬಟ್ಟೆಬರೆಗಳ ಮಾರಾಟಕ್ಕೆ ಸೆಂಟ್ರಲ್ ಕಮಿಟಿ ಮುಂದಾಗಬೇಕು. ಇದಕ್ಕಾಗಿ ತಾನು 5 ಹೊಲಿಗೆ ಯಂತ್ರವನ್ನು ಕಮಿಟಿಗೆ ನೀಡಲು ಸಿದ್ಧನಿದ್ದೇನೆ ಎಂದು ಯು.ಟಿ.ಖಾದರ್ ನುಡಿದರು.

ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಮುಹಮ್ಮದ್ ಮಸೂದ್ ಹೊಲಿಗೆ ಯಂತ್ರ ಪಡೆದವರು ಅದನ್ನು ಯಾವ ರೀತಿಯಲ್ಲಿ ಸದುಪಯೋಗಪಡಿಸುತ್ತಾರೆ ಎಂಬುದನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರಿಶೀಲನೆ ಮಾಡುವುದಾಗಿ ಹೇಳಿದರು.

ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್ ಸಂಘ ಸಂಸ್ಥೆಗಳ ಜೊತೆ ಸರಕಾರವೂ ಕೂಡ ಸಾಕಷ್ಟು ಯೋಜನೆಗಳನ್ನು ಪ್ರಕಟಿಸುತ್ತದೆ. ಅವುಗಳನ್ನು ಪಡೆಯುವ ಮೂಲಕ ಮುಸ್ಲಿಂ ಸಮುದಾಯವು ಸ್ವಾವಲಂಬಿಯಾಗುವುದರ ಜೊತೆಗೆ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.

ವೇದಿಕೆಯಲ್ಲಿ ಮಾಜಿ ಮೇಯರ್ ಕೆ.ಅಶ್ರಫ್, ಮುಮ್ತಾಝ್ ಅಲಿಕೃಷ್ಣಾಪುರ, ಸೈಯದ್ ಭಾಷಾ ತಂಙಳ್, ಅಮೀರ್ ಅಹ್ಮದ್ ತುಂಬೆ, ಶಾಹುಲ್ ಹಮೀದ್ ಕೆ.ಕೆ., ಶಾಹುಲ್ ಹಮೀದ್ ತಂಙಳ್, ಮಹ್ಮೂದ್ ಹಾಜಿ, ಹಾಜಿ ಬಿ.ಎಚ್.ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಾಜಿ ಹನೀಫ್ ಬಂದರ್ ಮತ್ತು ಮಾಧ್ಯಮ ಕಾರ್ಯದರ್ಶಿ ಅಬೂಬಕರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News