ಬಂದರ್ ಬೀಬಿ ಅಲಾಬಿ ರಸ್ತೆಯಲ್ಲಿ ನರಕ ದರ್ಶನ : ವಾಣಿಜ್ಯ ಕೇಂದ್ರದಲ್ಲಿ ಅನಧಿಕೃತ ತ್ಯಾಜ್ಯ ವಿಲೇವಾರಿ

Update: 2019-08-06 15:13 GMT

ಮಂಗಳೂರು, ಆ. 6: ಹಲವು ಶತಮಾನಗಳ ಇತಿಹಾಸ ಹೊಂದಿರುವ ಕರಾವಳಿಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನ ಬಂದರ್ ಕೋಟ್ಯಂತರ ರೂ. ವ್ಯವಹಾರದ ಮೂಲವಾಗಿದ್ದರೂ ಶುಚಿತ್ವದಲ್ಲಿ ಮಾತ್ರ ಆದಿಕಾಲದಷ್ಟು ಹಿಂದುಳಿದಿದೆ.

ಬಂದರ್‌ನ ಬೀಬಿ ಅಲಾಬಿ ರಸ್ತೆಯು ಮೋಟಾರ್ ವಾಹನಗಳ ಬಿಡಿಭಾಗಗಳು ಸಿಗುವ ಕೇಂದ್ರ ಸ್ಥಳವಾಗಿದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಗುಜರಿ ಅಂಗಡಿಗಳು ವಹಿವಾಟು ನಡೆಸುತ್ತವೆ. ಜನವಸತಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳಿವೆ. ಇಂತಹ ಪ್ರದೇಶವು ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.

‘ಬಂದರ್ ಪ್ರದೇಶದ ಬೀಬಿ ಅಲಾಬಿ ರಸ್ತೆಯ ಗುಜರಿ ಅಂಗಡಿಗಳ ಪಕ್ಕದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ತಂದು ಗುಡ್ಡೆ ಹಾಕಲಾಗುತ್ತಿದೆ. ಚೀಲಗಳಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ರಾತ್ರೋರಾತ್ರಿ ಎಸೆದು ಹೋಗುತ್ತಿರುವುದು ಸಾಮಾನ್ಯ ಪ್ರಕ್ರಿಯೆ ಎನ್ನುವಂತೆ ನಡೆಯುತ್ತಿದೆ. ಇದೆಲ್ಲದರ ಹೊಣೆಯನ್ನು ಬಡಪಾಯಿ ಗುಜರಿ ಅಂಗಡಿಯವರೇ ಹೊತ್ತುಕೊಳ್ಳುವಂತಾಗಿದೆ’ ಎಂದು ಮಂಗಳೂರು ಗುಜರಿ ಅಂಗಡಿಗಳ ಸಂಘದ ಅಧ್ಯಕ್ಷ ಅಹ್ಮದ್ ‘ವಾರ್ತಾಭಾರತಿ’ಗೆ ತಿಳಿಸಿದರು.

‘ಮಂಗಳೂರು ನಗರದ ಬೇರೆಡೆ ತ್ಯಾಜ್ಯ ಸುರಿಯಲು ಬಿಡುವುದಿಲ್ಲ. ಆದರೆ ನಗರದ ಮಾರುಕಟ್ಟೆಯ ಎಲ್ಲ ತ್ಯಾಜ್ಯವನ್ನು ಇಲ್ಲಿಯೇ ಸುರಿಯುತ್ತಿದ್ದಾರೆ. ಆದರೆ ಇಲ್ಲಿ ಹೇಳಲು-ಕೇಳಲು ಯಾರೂ ಇಲ್ಲವೆಂದು ರಾತ್ರಿ ವೇಳೆ ಸ್ಕೂಟರ್, ಟೆಂಪೊ, ರಿಕ್ಷಾ, ಕಾರುಗಳಲ್ಲಿ ಬಂದು ತ್ಯಾಜ್ಯ ಸುರಿಯುತ್ತಾರೆ. ಈ ಖಾಲಿ ಜಾಗದಲ್ಲಿ ಚಪ್ಪಲಿಗಳನ್ನು ತಯಾರಿಸಿದ ಬಳಿಕ ಉಳಿದುಕೊಳ್ಳುವ ತ್ಯಾಜ್ಯ, ಮರದ ತುಂಡುಗಳು, ಗಾದಿಯ ಒಳಭಾಗದ ಸ್ಪಂಜು, ಕಬ್ಬಿನ ತ್ಯಾಜ್ಯ, ತೆಂಗಿನಕಾಯಿಯ ಚಿಪ್ಪುಗಳು, ರಟ್ಟಿನ ಡಬ್ಬಿಗಳು, ತ್ಯಾಜ್ಯ ತುಂಬಿದ ಸಣ್ಣ ಸಣ್ಣ ಚೀಲಗಳಿಂದ ಹಿಡಿದು ದೊಡ್ಡ ದೊಡ್ಡ ಚೀಲಗಳವರೆಗೆ ಗುಡ್ಡೆ ಹಾಕಲಾಗಿದೆ’ ಎನ್ನುತ್ತಾರೆ ಗುಜರಿ ಅಂಗಡಿಗಳ ಅಸೋಸಿಯೇಶನ್‌ನ ಅಧ್ಯಕ್ಷ ಅಹ್ಮದ್.

3 ವಾರಕ್ಕೊಮ್ಮೆ ಸ್ವಚ್ಛತೆ

ತ್ಯಾಜ್ಯದ ಗುಡ್ಡೆಯೇ ಬೀಬಿ ಅಲಾಬಿ ರಸ್ತೆಯಲ್ಲಿ ಬಿದ್ದರೂ ಸಾರ್ವಜನಿಕರು ಮಾತೆತ್ತುವುದಿಲ್ಲ. ಕಳೆದ ಮೂರು ವಾರಗಳಿಂದ ಕಸ ಬಿದ್ದಿದೆ. ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದೇವೆ. ಕಾರ್ಪೊರೇಟರ್ ಸಹಿತ ಎಲ್ಲರಿಗೂ ವಿಷಯ ಮುಟ್ಟಿಸಿದ್ದೇವೆ. ತ್ಯಾಜ್ಯವನ್ನು ಇಂದು ವಿಲೇವಾರಿ ಮಾಡುತ್ತೇವೆ; ನಾಳೆ ಮಾಡುತ್ತೇವೆ ಎನ್ನುತ್ತಾರೆಯೇ ಹೊರತು, ಯಾವುದೇ ಕಾರ್ಯಕ್ಕೂ ಮುಂದಾಗುವುದಿಲ್ಲ ಎಂದು ಅಹ್ಮದ್ ಅವರು ಆರೋಪಿಸುತ್ತಾರೆ.

‘ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನವರು ಬೀಬಿ ಅಲಾಬಿ ರಸ್ತೆಗೆ ಬರುವುದೇ ಇಲ್ಲ. ನಗರದ ವಿವಿಧೆಡೆ ಪ್ರತಿದಿನವೂ ಬೀದಿಬೀದಿಯ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಆದರೆ ನಮ್ಮಲ್ಲಿ ಬರುವುದಿಲ್ಲ. ಇಲ್ಲಿ ಸಣ್ಣ ಸಣ್ಣ ತ್ಯಾಜ್ಯ ವಿಲೇವಾರಿ ವಾಹನಗಳು ಬರುತ್ತವೆ. ಆದರೆ ಆ ವಾಹನಗಳಲ್ಲಿ ಎಲ್ಲ ತ್ಯಾಜ್ಯ ತುಂಬಲಾಗುವುದಿಲ್ಲ. ವಾಪಸ್ ಬರುವುದಾಗಿ ಹೇಳುತ್ತಾರೆ. ಮೂರು ವಾರಗಳಿಂದ ಯಾವುದೇ ವಾಹನ ಬಂದಿಲ್ಲ’ ಎಂದು ಮತ್ತೊಂದು ಗುಜರಿ ಅಂಗಡಿಯೊಂದರ ಮಾಲಕ ಇಕ್ಬಾಲ್ ಆರೋಪಿಸಿದರು.

ಬೀಬಿ ಅಲಾಬಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಹೋಗುವವರು ಬರುವವರು ತ್ಯಾಜ್ಯ ಎಸೆದು ಹೋಗುತ್ತಾರೆ. ನಾವು ಕಂಡ ತಕ್ಷಣ ತ್ಯಾಜ್ಯ ಸುರಿಯಲು ವಿರೋಧಿಸುತ್ತೇವೆ. ಆದರೆ ಅವರು ರಾತ್ರಿ ವೇಳೆ ತ್ಯಾಜ್ಯ ಸುರಿದು ಹೋಗುತ್ತಾರೆ. ನಮ್ಮ ಕಷ್ಟವನ್ನು ಕೇಳವವರಾರೂ ಇಲ್ಲದಂತಾಗಿದೆ ಎಂದು ಇನ್ನೊಂದು ಗುಜರಿ ಅಂಗಡಿ ಮಾಲಕ ಲತೀಫ್ ಅಳಲು ತೋಡಿಕೊಂಡರು.

''ತ್ಯಾಜ್ಯ ಸುರಿಯುತ್ತಿರುವುದು ಗುಜರಿ ಅಂಗಡಿಯವರೇ ಎಂದು ಕಳಂಕ ಹೊರಿಸುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ, ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಾಣದ ಕೈಗಳೇ ತ್ಯಾಜ್ಯ ತಂದು ಸುರಿಯುತ್ತಿವೆ. ತ್ಯಾಜ್ಯ ಸುರಿಯಲು ಪಾಲಿಕೆಯವರು ಅವಕಾಶ ಕಲ್ಪಿಸಬಾರದು. ಅದಕ್ಕೆ ನಮ್ಮ ಬೆಂಬಲವಿದೆ.''
-ಅಹ್ಮದ್, ಮಂಗಳೂರು ಗುಜರಿ ಅಂಗಡಿಗಳ ಸಂಘದ ಅಧ್ಯಕ್ಷ

‘ರೋಗಗಳ ಆವಾಸಸ್ಥಾನ’
ರಸ್ತೆಯ ಅರ್ಧ ಭಾಗದವರೆಗೆ ತ್ಯಾಜ್ಯ ಸುರಿಯಲಾಗಿದೆ. ಕಳೆದ ಮೂರು ವಾರಗಳಿಂದ ತ್ಯಾಜ್ಯ ಬಿದ್ದಲ್ಲಿಯೇ ಬಿದ್ದಿದೆ. ನಗರದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಈಗಾಗಲೇ ಬೀಬಿ ಅಲಾಬಿ ರಸ್ತೆಯ ನೂರಾರು ಮಂದಿ ಆಸ್ಪತ್ರೆಗೆ ದಿನನಿತ್ಯ ಅಲೆದಾಡುವಂತಾಗಿದೆ. ಡೆಂಗ್ ನಂತಹ ಮಹಾಮಾರಿ ರೋಗಗಳಿಂದ ಅಮೂಲ್ಯ ಜೀವಗಳೂ ಬಲಿಯಾಗಿವೆ ಎನ್ನುತ್ತಾರೆ ಗುಜರಿ ಅಂಗಡಿ ಮಾಲಕ ಲತೀಫ್.

Full View

Writer - ಬಂದೇ ನವಾಝ್ ಮ್ಯಾಗೇರಿ

contributor

Editor - ಬಂದೇ ನವಾಝ್ ಮ್ಯಾಗೇರಿ

contributor

Similar News