ಅಕ್ರಮ ಗೋ ಸಾಗಾಟ ತಡೆದ ಕಾರ್ಯಕರ್ತರ ಪ್ರಕರಣ ಕೈ ಬಿಡಲು ಬಿಜೆಪಿ ಆಗ್ರಹ

Update: 2019-08-06 14:41 GMT

ಮಂಗಳೂರು, ಆ.6: ದ.ಕ.ಜಿಲ್ಲೆಯ ವಿವಿಧ ಕಡೆ ಅಕ್ರಮ ಗೋ ಸಾಗಾಟ ಮಾಡುವವರನ್ನು ತಡೆದು ರಕ್ಷಿಸಿದ ಹಲವು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರ ಮೇಲಿನ ಪ್ರಕರಣ ಕೈ ಬಿಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಜಿಲ್ಲೆಯಲ್ಲಿ ಗೋ ಕಳ್ಳತನ ಹೆಚ್ಚುತ್ತಿವೆ. ಅದಕ್ಕೆ ಪೊಲೀಸ್ ಇಲಾಖೆಯೇ ಕಾರಣವಾಗಿದೆ. ಪೊಲೀಸರ ನಿಷ್ಕ್ರಿಯತೆಯನ್ನು ಮನಗಂಡ ಕಾರ್ಯಕರ್ತರು ಗೋಸಾಗಾಟ ಮಾಡುವವರನ್ನು ತಡೆದು ನಿಲ್ಲಿಸಿದ್ದಾರೆ. ಅಂತಹವರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣವನ್ನು ಕೈ ಬಿಡಲು ಒತ್ತಾಯಿಸಲಾಗಿದೆ ಎಂದರು.

370ನೆ ವಿಧಿ ರದ್ದತಿಗೆ ಸ್ವಾಗತ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 370ನೆ ವಿಧಿಯನ್ನು ರದ್ದುಗೊಳಿಸುವ ಮೂಲಕ ಹಿಂದಕ್ಕೆ ಪಡೆಯಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ಕ್ರಮವಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿಯ ಕನಸನ್ನು ನನಸುಗೊಳಿಸುವ ಮೂಲಕ ಬಿಜೆಪಿಗೆ ಸೈದ್ಧಾಂತಿಕ ಜಯ ದೊರಕಿಸಿಕೊಟ್ಟಿದ್ದಾರೆ. ದೇಶದ ಏಕತೆ ಮತ್ತು ಅಖಂಡತೆಗೆ ಇದು ಪೂರಕವಾಗಿದೆ ಎಂದರು.

ಟಿಪ್ಪು ಜಯಂತಿ ರದ್ಧತಿಗೂ ಸ್ವಾಗತ: ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ಮುಸ್ಲಿಮರು ಕೇಳಿರಲಿಲ್ಲ. ಆದರೆ, ಸಿದ್ದರಾಮಯ್ಯ ಸರಕಾರ ಮತಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಜಾರಿಗೊಳಿಸಿದರು. ಇದರಿಂದ ಮತೀಯ ಘರ್ಷಣೆ, ಹತ್ಯೆಯೂ ನಡೆಯಿತು. ಹಲವರ ಮೇಲೆ ಪ್ರಕರಣವೂ ದಾಖಲಾಯಿತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಟಿಪ್ಪು ಜಯಂತಿ ರದ್ದುಗೊಳಿಸುವ ಮೂಲಕ ಬಿಜೆಪಿಯ ಹೋರಾಟಕ್ಕೆ ಜಯ ತಂದುಕೊಟ್ಟಿದ್ದಾರೆ ಎಂದು ಸಂಜೀವ ಮಠಂದೂರು ಹೇಳಿದರು.

ಸಾಲ ಮನ್ನಾ: ರಾಜ್ಯದ ಮೀನುಗಾರರು ಮತ್ತು ನೇಕಾರರ ಸಾಲ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಾವಿರಾರು ಮೀನುಗಾರರು ಮತ್ತು ನೇಕಾರ ಕುಟುಂಬಗಳನ್ನು ಸಮಸ್ಯೆಯಿಂದ ಪಾರು ಮಾಡಿದ್ದಾರೆ ಎಂದರು.

ಸದಸ್ಯತ್ವ ಅಭಿಯಾನ: ಜಗತ್ತಿನಲ್ಲೇ ಬಿಜೆಪಿ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 32 ಕೋಟಿ ಮತಗಳು ಬಿಜೆಪಿಗೆ ಸಿಕ್ಕಿತ್ತು. ಈಗಾಗಲೆ ಜಿಲ್ಲೆಯಲ್ಲಿ 75 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ ಕಾರ್ಯ ಆಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಜಿಲ್ಲೆಯ 1,861 ಬೂತುಗಳಲ್ಲಿ 2 ಲಕ್ಷ ಸದಸ್ಯತ್ವದ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮುಖಂಡರಾದ ಸಂಜಯ್ ಪ್ರಭು, ಕಿಶೋರ್ ರೈ, ಸತೀಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News