ಶಿರಸಿ ಘಾಟ್‌ನಲ್ಲಿ ಕುವೈತ್ ಉದ್ಯೋಗ ವಂಚಿತರ ಪರದಾಟ: ಪ್ರಯಾಣದ ವೇಳೆ ಸಂಪರ್ಕ ಕಡಿತ

Update: 2019-08-06 15:21 GMT

ಮಂಗಳೂರು, ಆ.6: ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ಕಳೆದ ಏಳೆಂಟು ತಿಂಗಳುಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ 34 ಮಂದಿ ಭಾರತೀಯ ನೌಕರರ ಪೈಕಿ ಕೊನೆಯಲ್ಲಿ ಉಳಿದುಕೊಂಡ 11 ಮಂದಿ ಮುಂಬೈಗೆ ವಾಪಸಾಗಿದ್ದರು. ಈ ಪೈಕಿ ಎಂಟು ಮಂದಿ ಮಂಗಳೂರಿಗೆ ಬರಬೇಕಾಗಿದ್ದವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ರವಿವಾರ ರಾತ್ರಿ 8:30ಕ್ಕೆ ಕುವೈತ್‌ನಿಂದ ವಿಮಾನ ಮೂಲಕ ಮರುದಿನ ಮುಂಬೈಗೆ ಆಗಮಿಸಿದ್ದರು. ಇವರಲ್ಲಿ ಮಂಗಳೂರಿನ ಎಂಟು ಮಂದಿ ಮುಂಬೈನಿಂದ ಬಸ್ ಮೂಲಕ ಮಂಗಳೂರಿಗೆ ಮಂಗಳವಾರ ಆಗಮಿಸಬೇಕಾಗಿತ್ತು. ಆದರೆ ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಸಿ ಘಾಟ್‌ನ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಶೇಖರಣೆಗೊಂಡ ಮಳೆ ನೀರಿನಿಂದ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

‘ಬಹಳಷ್ಟು ಸಮಯದಿಂದ ಬಳಲಿ ಬೆಂಡಾಗಿದ್ದ ನಮಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಮಂಗಳೂರು ತಲುಪಿ ಬಿಟ್ಟೆವು ಎನ್ನುವಷ್ಟರಲ್ಲಿಯೇ ಮತ್ತೊಂದು ಸಂಕಷ್ಟಕ್ಕೊಳಗಾದೆವು. ಮುಂಬೈನಿಂದ ಹುಬ್ಬಳ್ಳಿ ಮಾರ್ಗವಾಗಿ ಬರುತ್ತಿದ್ದ ಖಾಸಗಿ ಬಸ್ ಶಿರಸಿ ಘಾಟ್‌ನ ಕೊನೆಯ ತಿರುವಿನ ಸಮೀಪ ರಸ್ತೆಯಲ್ಲೇ ಆರು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಇದರಿಂದ ಬಸ್ ಮುಂದಡಿ ಇಡದಂತಾಗಿದೆ’ ಎಂದು ಕುವೈತ್ ಸಂತ್ರಸ್ತ ಅಝೀಝ್ ಬೋಳಾಯಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ರಸ್ತೆ ಜಖಂಗೊಂಡ ಸ್ಥಳದಿಂದ ಕುಮಟಾ ಕೇವಲ 10 ಕಿ.ಮೀ. ದೂರದಲ್ಲಿದೆ. ಆದರೆ ಬಸ್ ಹಿಂದಕ್ಕೂ ಹೋಗಲಾಗುವುದಿಲ್ಲ. ಮುಂದಕ್ಕೂ ಹೋಗಲಾಗದಂತಹ ವಿಷಮ ಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳು ವಿಪರೀತ ಎನ್ನುವಂತೆ ನಮ್ಮನ್ನು ಮುಕ್ಕುತ್ತಿವೆ. ಬೆಳಗ್ಗೆಯಿಂದಲೇ ಹೊಟ್ಟೆಗೆ ತುತ್ತು ತಿಂಡಿ-ಊಟವಿಲ್ಲದೇ ನರಳುವಂತಾಗಿದೆ. ಶಿರಸಿಯ ತನ್ನ ಸ್ನೇಹಿತ ಯಾಕೂಬ್ ಎಂಬವರು ತಂದ ಆಹಾರದಿಂದಲೇ ಬಸ್‌ನಲ್ಲಿದ್ದ 12 ಮಂದಿ ಹೊಟ್ಟೆ ತುಂಬಿಸಿಕೊಂಡಿದ್ದೇವೆ ಎಂದು ಅಝೀಝ್ ಬೋಳಾಯಿ ಸಂಕಷ್ಟ ತೋಡಿಕೊಂಡರು.

ಸಂಚಾರ ರದ್ದು

ಬೆಳಗ್ಗೆ 9 ಗಂಟೆಯಿಂದಲೇ ಬಸ್‌ಗಳ ಸಂಚಾರ ಕಡಿತಗೊಂಡಿದ್ದು, ಬಸ್‌ನ ಹಿಂಭಾಗ ಸುಮಾರು 1-2 ಕಿ.ಮೀ. ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ತಮ್ಮ ಬಸ್‌ನವರಲ್ಲದೇ ನೂರಾರು ಸಂಖ್ಯೆಯಲ್ಲಿನ ಪ್ರಯಾಣಿಕರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇನ್ನೂ ರಸ್ತೆಯಲ್ಲಿನ ಮಳೆ ನೀರಿನ ಪ್ರಮಾಣ ಇಳಿಕೆಯಾಗಿಲ್ಲ. ಇಲ್ಲಿ ಉಳಿದುಕೊಳ್ಳಲು ಯಾವುದೇ ಹೋಟೆಲ್ ವ್ಯವಸ್ಥೆ ಇಲ್ಲ; ಒಂದು ಚಹಾದ ಮಳಿಗೆಯೂ ಇಲ್ಲ. ವಿದ್ಯುತ್ ಸಂಪರ್ಕವಂತೂ ಇಲ್ಲವೇ ಇಲ್ಲ ಎನ್ನುತ್ತಾರೆ ಮತ್ತೊಬ್ಬ ಸಂತ್ರಸ್ತ.

ಕುವೈತ್‌ನಲ್ಲಿ ಉದ್ಯೋಗ ವಂಚನೆಗೊಂಡು ಅತಂತ್ರ ಸ್ಥಿತಿಯಲ್ಲಿದ್ದ ಪೈಕಿ ಇತರ 23 ಮಂದಿ ಹಂತ ಹಂತಗಳಲ್ಲಿ ಅನಿವಾಸಿ ಭಾರತೀಯರ ನೆರವಿನಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು. ಆದರೆ ಉದ್ಯೋಗ ನೀಡಿದ ಕಂಪೆನಿಯು ಸೊತ್ತುಗಳನ್ನು ಮರಳಿಸದ ಆರೋಪದಲ್ಲಿ ವೀಸಾ ರದ್ದತಿ ಹಾಗೂ ಪಾಸ್‌ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಕೊನೆಗೂ ಭಾರತೀಯ ರಾಯಭಾರಿ ಕಚೇರಿ ಹಾಗೂ ಅನಿವಾಸಿ ಭಾರತೀಯ ಉದ್ಯಮಿಗಳ ಪ್ರಯತ್ನದ ಫಲವಾಗಿ ಬಾಕಿಯುಳಿದ 11 ಮಂದಿ ತಾಯ್ನಾಡಿಗೆ ವಾಪಸಾಗಿದ್ದರು.

11 ಮಂದಿ ಪೈಕಿ 8 ಮಂದಿಯ ದಂಡ ಹಾಗೂ ಟಿಕೆಟ್ ಮೊತ್ತವನ್ನು ಕುವೈತ್‌ನ ಭಾರತೀಯ ಪ್ರವಾಸಿ ಪರಿಷತ್ ಹಾಗೂ ಕೇರಳ ಮುಸ್ಲಿಂ ಅಸೋಸಿಯೇಷನ್ ಭರಿಸಿತ್ತು. ಉಳಿದ ಮೂರು ಮಂದಿ ತಮಿಳ್ನಾಡಿನವರಾಗಿದ್ದು, ಅವರ ದಂಡ ಹಾಗೂ ಟಿಕೆಟ್ ವೆಚ್ಚವನ್ನು ಉದ್ಯಮಿ ಇಳಂಗೋವನ್ ಪಾವತಿಸಿದ್ದರು. ಇನ್ನೇನು ಮಂಗಳೂರು ತಲುಪಬೇಕು ಎನ್ನುವಷ್ಟರಲ್ಲಿ ಈ ಅವಘಡ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News