ಹೆಬ್ರಿ: ರಸ್ತೆಯ ಮೇಲೆ ಹರಿದ ಸೀತಾನದಿ; ರಾಷ್ಟ್ರೀಯ ಹೆದ್ದಾರಿ ಬಂದ್
ಹೆಬ್ರಿ, ಆ.6: ಹೆಬ್ರಿ ಪರಿಸರದಲ್ಲಿ ಮಂಗಳವಾರ ಬೆಳಗ್ಗೆಯಿಂದ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೆಬ್ರಿಯ ಬಂಡಿಮಠದಲ್ಲಿ ಸೀತಾನದಿ ಮೈತುಂಬಿ ಉಕ್ಕಿ ರಸ್ತೆಯ ಮೇಲೆ ಹರಿಯುತಿದ್ದು, ಇದರಿಂದ ಉಡುಪಿ- ಶಿವಮೊಗ್ಗ ಜಿಲ್ಲೆಗಳನ್ನು ಹೆಬ್ರಿ- ತೀರ್ಥಹಳ್ಳಿ ಮೂಲಕ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಸಂಪರ್ಕ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತು.
ಕಳೆದ ಮೂರು ದಿನಗಳಿಂದ ಪಶ್ಚಿಮ ಘಟ್ಟದ ಈ ತಪ್ಪಲು ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತಿದ್ದು, ಇದರಿಂದ ಇಂದು ಬೆಳಗ್ಗೆಯಿಂದ ಸೀತಾನದಿ ಬಂಡಿಮಠದಲ್ಲಿ ರಸ್ತೆಯ ಮೇಲೆ ಹರಿಯತೊಡಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಶಿವಮೊಗ್ಗ ಕಡೆಗೆ ಹೋಗುವ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳು ಹೆಬ್ರಿ, ಕುಚ್ಚೂರು, ಮಡಾಮಕ್ಕಿ, ಮಾಂಡಿಮೂರುಕ್ಯೆ ಮೂಲಕ ಸೋಮೆಶ್ವರಕ್ಕೆ ಹೋಗಿ ಅಲ್ಲಿಂದ ಶಿವಮೊಗ್ಗ ಕಡೆ ತೆರಳಿದವು.
ಹೆಬ್ರಿಯ ದೇಕಿಬೆಟ್ಟು ಎಂಬಲ್ಲಿ ನದಿಗೆ ನಿರ್ಮಿಸಿದ ಅಣೆಕಟ್ಟು ತುಂಬಿದ್ದು ಅಪಾಯದ ಸೂಚನೆ ಕಂಡು ಬಂದಿದೆ. ಹೆಬ್ರಿಯ ಮದಗದಲ್ಲಿ ನೀರು ತುಂಬಿ ಕುಚ್ಚೂರು ರಸ್ತೆಯ ಮೇಲೆ ಹರಿಯುತ್ತಿತ್ತು. ಅಲ್ಲದೇ ಹೆಬ್ರಿಯ ಬ್ಯೆಲುಮನೆಯ ರಾಘವೇಂದ್ರ ಮಠದ ಒಳಗೆ ನೀರು ನುಗ್ಗಿದೆ. ಹೆಬ್ರಿ ಪರಿಸರದಲ್ಲಿ ತಗ್ಗು ಪ್ರದೇಶಗಳಲ್ಲಿ ಇರುವ ಕಟ್ಟಡದ ಅಂಗಡಿಗಳ ಒಳಗೂ ನೀರು ನುಗ್ಗಿದೆ.
ಬ್ರಹ್ಮಾವರ ರಸ್ತೆಯ ಹೆಬ್ಬಾರ್ ಕಾಂಪ್ಲೆಕ್ಸ್‌ನ ಅಂಗಡಿ ಕೋಣೆಯ ಒಳಗೂ ನೀರು ನುಗ್ಗಿದೆ. ಹೆಬ್ರಿ ಹುತ್ತುರ್ಕೆ ಬಳಿ ರಸ್ತೆಯಲ್ಲಿ ನೀರು ತುಂಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಪಕ್ಕದಲ್ಲಿದ್ದ ನಾಗಬ್ರಹ್ಮ ದೇವರ ಸನ್ನಿಧಿ ಬಳಿಯು ನೀರು ತುಂಬಿದೆ. ಹೆಬ್ರಿ ಪರಿಸರದ ನದಿ, ತೋಡು, ಹಳ್ಳಗಳು ಭಾರಿಮಳೆಯಿಂದಾಗಿ ತುಂಬಿ ಹರಿಯುತ್ತಿವೆ. ಮಳೆಯೊಂದಿಗೆ ಆಗಾಗ ಸಿಡಿಲು ಗಾಳಿಯೂ ಇದ್ದು, ಹಲವೆಡೆ ಮರಗಳು ವಿದ್ಯುತ್ ಲ್ಯೆನ್ ಮೇಲೆ ಬಿದ್ದು ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಮುನಿಯಾಲು ಪರಿಸರದಲ್ಲಿ ಬಿರುಗಾಳಿ: ಹೆಬ್ರಿ ಪರಿಸರದಲ್ಲಿ ಮಂಗಳವಾರ ಮಳೆಯ ನಡುವೆಯೇ ಶಿವಪುರ ಗ್ರಾಮದ ಮುಳ್ಳುಗುಡ್ಡೆ, ನಾಯರಕೋಡು ಖಜಾನೆ, ಕೆಳಖಜಾನೆ, ವರಂಗ ಗ್ರಾಮದ ಪಡುಕುಡೂರು, ಮುನಿಯಾಲು ಪರಿಸರದಲ್ಲಿ ಅಪರಾಹ್ನ12 ಗಂಟೆಯ ಸುಮಾರಿಗೆ ಭಾರಿ ಬಿರುಗಾಳಿ ಬೀಸಿದ್ದು ಹಲವೆಡೆ ಮರಗಳು ನೆಲಕ್ಕೆ ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಶಿವಪುರ ಗ್ರಾಮದ ನಾಯರಕೋಡು ಅಂಗನವಾಡಿ ಕಟ್ಟಡದ ಮೇಲೆ ಮರ ಬಿದ್ದು ಹಾನಿಯಾಗಿದೆ. ಆದರೆ ಒಳಗಿದ್ದ ಪುಟ್ಟ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಶಿವಪುರ ಗ್ರಾಪಂ ಆಡಳಿತ ಗ್ರಾಮಸ್ಥರ ಸಹಕಾರದೊಂದಿಗೆ ತಕ್ಷಣ ಮರ ತೆರವು ಮಾಡಿ ದುರಸ್ತಿ ಕಾರ್ಯ ನಡೆಸಿದೆ. ತಗ್ಗು ಪ್ರದೇದ ಹಲವು ಕಡೆಗಳಲ್ಲಿ ನೀರು ನುಗ್ಗಿದೆ. ಅಡಿಕೆ ತೋಟ, ಬೇಸಾಯ ಮಾಡಿರುವ ಗದ್ದೆಗಳಿಗೆ ನೀರು ತುಂಬಿ ಅಪಾರ ಹಾನಿಯಾಗಿದೆ. ಖಾಸಗಿ ಜಮೀನು ಮತ್ತು ಅರಣ್ಯದಲ್ಲಿ ನೂರಾರು ಮರಗಳು ಉರುಳಿ ಬಿದ್ದಿವೆ.
ಕುಸಿದ ಆವರಣ ಗೋಡೆ:
ತಾಲೂಕಿನ ಕಬ್ಬಿನಾಲೆಯ ಕೊಂಕಣಾರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಮಂಗಳವಾರ ಮಳೆಯಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಭಾರಿ ಗಾಳಿ ಮಳೆ ಹಿನ್ನಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರ ಹೆಬ್ರಿ ತಾಲೂಕಿನ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಹೆಬ್ರಿ ತಾಲೂಕು ತಹಶೀಲ್ಧಾರ್ ಕೆ. ಮಹೇಶ್ಚಂದ್ರ ರಜೆ ಘೋಷಿಸಿದ್ದಾರೆ.