×
Ad

ಕುಂದಾಪುರ: ತಾಲೂಕಿನಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ನದಿಗಳು

Update: 2019-08-06 21:33 IST

ಕುಂದಾಪುರ, ಆ. 6: ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಇಂದು ಗುಡುಗು-ಮಿಂಚು, ಸಿಡಿಲಿನೊಂದಿಗೆ ಇನ್ನಷ್ಟು ತೀವ್ರಗೊಂಡಿದ್ದು, ಇದರಿಂದ ತಾಲೂಕಿನ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದ ತುಂಬಿದ್ದು, ನೆರೆಯ ಭೀತಿ ಎದುರಾಗಿದೆ.

ತಾಲೂಕಿನೆಲ್ಲೆಡೆ ಕುಂಭದ್ರೋಣ ಮಳೆ ಅಬ್ಬರ ಜೋರಾಗಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಇದೇ ರೀತಿ ಮಳೆ ಮುಂದುವರಿದರೆ ನೆರೆಯ ಭೀತಿ ಜನು ಹಾಗೂ ಅಧಿಕಾರಿಗಳನ್ನು ಆವರಿಸಿದೆ.

ತಾಲೂಕಿನ ಕುಂದಾಪುರ, ಉಪ್ಪುಂದ, ಮರವಂತೆ, ಗಂಗೊಳ್ಳಿ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ತಲ್ಲೂರು, ಹೆಮ್ಮಾಡಿ, ಬಿದ್ಕಲ್‌ಕಟ್ಟೆ, ಹಾಲಾಡಿ, ಮೊಳಹಳ್ಳಿ, ಹುಣ್ಸೆಮಕ್ಕಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು, ಸಿದ್ದಾಪುರ, ಶಂಕರನಾರಾಯಣ, ಹೊಸಂಗಡಿ, ಕೊಲ್ಲೂರು, ವಂಡ್ಸೆ, ಜಡ್ಕಲ್, ನೇರಳಕಟ್ಟೆ, ಅಂಪಾರು, ಕೆರಾಡಿ, ಗುಲ್ವಾಡಿ, ಸೌಕೂರು, ಬೈಂದೂರು, ಗೋಳಿಹೊಳೆ ಸಹಿತ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದಲೇ ನಿರಂತರ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ಕೆಲ ದಿನಗಳ ಹಿಂದಷ್ಟೇ ನಟ್ಟಿ ಮುಗಿದಿರುವ ಭತ್ತದ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಕೆಲವೆಡೆಗಳಲ್ಲಿ ಬಾಳೆ ಗಿಡಗಳು, ರಬ್ಬ್ ಮರಗಳು ಗಾಳಿಗೆ ಉರುಳಿ ಬಿದ್ದಿವೆ.

ಶಾಲೆಗಳಿಗೆ ರಜೆ:

ಇಂದು ಜಿಲ್ಲಾಡಳಿತವಾಗಲಿ, ಶಿಕ್ಷಣ ಇಲಾಖೆಯಾಗಲೀ ಅಧಿಕೃತವಾಗಿ ಶಾಲೆಗಳಿಗೆ ರಜೆಯನ್ನು ಘೋಷಿಸದಿದ್ದರೂ, ಭಾರೀ ಮಳೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳ ಕೆಲ ಶಾಲೆಗಳಿಗೆ ಶಿಕ್ಷಕರೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗ್ಗಿನಿಂದಲೇ ರಜೆ ಘೋಷಿಸಿದ್ದರೆ, ಇನ್ನು ಕೆಲವೆಡೆ ಮಧ್ಯಾಹ್ನದ ಬಿಸಿಯೂಟದ ಬಳಿಕ ರಜೆ ನೀಡಲಾಗಿತ್ತು.

ಕುಂದಾಪುರ, ಬೈಂದೂರು ಭಾಗದ ಸೌಪಾರ್ಣಿಕ, ಕುಬ್ಜಾ, ಚಕ್ರ, ಕೇತ, ವಾರಾಹಿ/ಹಾಲಾಡಿ, ಸುಮನಾವತಿ ಸಹಿತ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಭಾಗಗಳಲ್ಲಿ ಈ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ನದಿ ಪಾತ್ರಗಳಲ್ಲಿರುವ ಜನರು ಸದ್ಯ ಮನೆಯನ್ನು ತೊರೆಯದೇ ಇದ್ದರೂ, ನೀರಿನ ಮಟ್ಟ ಏರಿದರೆ, ಸುರಕ್ಷಿತ ಸ್ಥಳಗಳಿಗೆ ತೆಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ.

ಕಡಲು ಪ್ರಕ್ಷುಬ್ಧ: ಪಶ್ಚಿಮದ ಅರಬಿಸಮುದ್ರ ಕುಂದಾಪುರ, ಬೈಂದೂರುಗಳಲ್ಲಿ ಪ್ರಕ್ಷುಬ್ಧಗೊಂಡಿದ್ದು, ಕಿರಿಮಂಜೇಶ್ವರದಲ್ಲಿ ಮಾತ್ರ ಕಡಲುಕೊರೆತ ಕಾಣಿಸಿ ಕೊಂಡಿದೆ. ಉಳಿದಂತೆ ಕೋಡಿ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ, ಕೊಡೇರಿ, ಶಿರೂರು ಭಾಗಗಳಲ್ಲಿ ಅಲೆಗಳ ಅಬ್ಬರವೂ ಬಿರುಸಾಗಿದ್ದು, ತೀರದ ನಿವಾಸಿಗರನ್ನು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಸಿಇಓ ಸಿಂಧೂ ಬಿ.ರೂಪೇಶ್ ಅವರು ಇಂದು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನೆರೆಯ ಭೀತಿ ಕಾಣಿಸಿ ಕೊಂಡಿರುವ ಹಲವು ಪ್ರದೇಶಗಳಿಗೆ ಇಂದು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು.

ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಜಲಾವೃತಗೊಂಡಿರುವ ನಾವುಂದ, ಮರವಂತೆ, ಬಡಾಕೆರೆ, ನಾಡ, ಸಾಲ್ಪುಡ ಭಾಗಗಳಲ್ಲಿರುವ ಮನೆಗಳಿಗೆ ಇವರು ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಇವರೊಂದಿಗೆ ಕುಂದಾಪುರದ ಉಪವಿಭಾಗಾಧಿಕಾರಿ ಡಾ. ಎಸ್. ಎಸ್. ಮಧುಕೇಶ್ವರ್, ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಮತ್ತಿತರರು ಇದ್ದರು.

ಜಲಾಶಯ ನೀರು ಹೊರಕ್ಕೆ: ಮುನ್ನೆಚ್ಚರಿಕೆ

ವಾರಾಹಿ ಯೋಜನೆಯ ಎತ್ತಣಕಟ್ಟೆ ಜಲಾಶಯದ ನೀರಿನ ಮಟ್ಟ ಏರಿಕೆ ಯಾಗುತ್ತಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 563.88ಮೀ. ಆಗಿದ್ದು, ಈಗಾಗಲೇ ಜಲಾಶಯದಲ್ಲಿ 563.21 ಮೀ. ನೀರು ಸಂಗ್ರಹವಾಗಿದೆ. ಇದೇ ರೀತಿಯ ಒಳಹರಿವು ಮುಂದುವರಿದರೆ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಬೇಕಾಬಹುದು. ಇದರಿಂದ ವಾರಾಹಿ/ ಹಾಲಾಡಿ ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಎನ್ನುವ ಮುನ್ನೆಚ್ಚರಿಕೆಯ ಆದೇಶವನ್ನು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಅಭಿಯಂತರರು ಹೊರಡಿಸಿದ್ದಾರೆ.

ಇದರಿಂದ ಶಂಕರನಾರಾಯಣ, ಹಾಲಾಡಿ, ಕಂಡ್ಲೂರು, ಕಾವ್ರಾಡಿ, ಸೌಕೂರು, ಗುಲ್ವಾಡಿ, ಬಳ್ಕೂರು, ಬಸ್ರೂರು, ಕೋಣಿ ಭಾಗಗಳಲ್ಲಿ ನೆಲೆಸಿರುವ ಜನರಿಗೆ ಪ್ರವಾಹ ಭೀತಿ ಎದುರಾಗಿದ್ದು, ಕಳೆದ ವರ್ಷ ಆ.14 ರಂದು ವಾರಾಹಿ ಜಲಾಶಯದ ನೀರು ಹೊರಬಿಡಲಾಗಿತ್ತು. ಆಗ ಸೌಕೂರು, ಗುಲ್ವಾಡಿ, ಹಾಲಾಡಿ ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News