ಬೈಂದೂರು ತಾಲೂಕು: 100ಕ್ಕೂ ಅಧಿಕ ಮನೆಗಳು ಜಲಾವೃತ
ಉಡುಪಿ, ಆ.6: ಸತತ ಮಳೆಯಿಂದ ಬೈಂದೂರು ತಾಲೂಕು ಕಂಗೆಟ್ಟಿದ್ದು, ತುಂಬಿ ಹರಿಯುತ್ತಿರುವ ನದಿಯಿಂದಾಗಿ ನಾವುಂದ, ಬಡಾಕೆರೆ ಹಾಗೂ ನಾಡಾ ಗ್ರಾಮಗಳ 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಆದರೆ ಅಪರಾಹ್ನದ ಬಳಿಕ ಮಳೆಯ ಬಿರುಸು ಕಡಿಮೆ ಗೊಂಡಿರುವುದರಿಂದ ನೀರು ಇಳಿಯತೊಡಗಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.
ನಾವುಂದದಲ್ಲಿ 30, ಬಡಾಕೆರೆಯಲ್ಲಿ 25, ನಾಡಾದಲ್ಲಿ ಸುಮಾರು 50 ಮನೆಗಳು ಜಲಾವೃತಗೊಂಡಿದ್ದು, ಇವುಗಳಲ್ಲಿ ನಾವುಂದದ 5 ಹಾಗೂ ಬಡಾಕೆರೆಯ ಮೂರು ಮನೆಗಳವರು ಸಮೀಪದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ಇವರೆಲ್ಲವೂ ತಮ್ಮ ಮನೆಗಳಲ್ಲೇ ಇದ್ದು, ರಾತ್ರಿ ಇನ್ನಷ್ಟು ನೀರು ಏರತೊಡಗಿದರೆ ಸುರಕ್ಷಿತ ಜಾಗಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸದ್ಯಕ್ಕೆ ಇವರಿಗೆ ಮನೆಗಳಿಗೆ ಹೋಗಿ ಬರಲು ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ಈ ಮನೆಗಳವರು ಗಂಜಿಕೇಂದ್ರಕ್ಕೆ ಬರಲು ಉತ್ಸಾಹ ತೋರದ ಕಾರಣ ಹಾಗೂ ನೀರು ಇಳಿಯತೊಡಗಿರುವುದರಿಂದ ಸದ್ಯಕ್ಕೆ ಎಲ್ಲೂ ಗಂಜಿ ಕೇಂದ್ರ ತೆರೆದಿಲ್ಲ. ಅಗತ್ಯ ಬಿದ್ದರೆ ಇದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅವರು ನುಡಿದರು.
ಇಂದು ಮನೆಗಳು ಜಲಾವೃತಗೊಂಡಿರುವ ಕೆಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಸಿಇಓ ಸಿಂಧು ಬಿ.ರೂಪೇಶ್ ಭೇಟಿ ನೀಡಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಾರ್ಗದರ್ಶನ ನೀಡಿದ್ದಾರೆ ಎಂದೂ ಅವರು ಹೇಳಿದರು.
ಅರಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರೂ, ಕಿರಿಮಂಜೇಶ್ವರ ಹೊರತು ಪಡಿಸಿ ಉಳಿದೆಡೆ ಯಾವುದೇ ಅಪಾಯ ಎದುರಾಗಿಲ್ಲ. ಕಿರಿಮಂಜೇಶ್ವರದಲ್ಲಿ ನಾಲ್ಕು ತೆಂಗಿನಮರಗಳು ಕಡಲು ಪಾಲಾಗಿವೆ. ಉಳಿದಂತೆ ಮರವಂತೆ ಸೇರಿದಂತೆ ಎಲ್ಲೂ ಕಡಲಕೊರೆತ ಕಂಡುಬಂದಿಲ್ಲ ಎಂದರು.
ನಿನ್ನೆ ರಾತ್ರಿಯಿಂದ ತಾಲೂಕಿನಲ್ಲಿ ಐದು ಮನೆಗಳು ಮಳೆ-ಗಾಳಿಯಿಂದ ಹಾನಿಗೊಂಡ ವರದಿಗಳು ಬಂದಿವೆ. ನಂದನವನ ಗ್ರಾಮದ ಕೃಷ್ಣಿ ಪೂಜಾರಿ ಅವರ ಮನೆಗೆ 20,000ರೂ., ಕೆರ್ಗಾಲಿನ ಹೆರಿಯಕ್ಕ ಪೂಜಾರಿ ಮನೆಗೆ 22,000ರೂ., ಕಿರಿಮಂಜೇಶ್ವರ ಕೊಡೇರಿಯ ಲಕ್ಷ್ಮಣ ಖಾರ್ವಿ ಮನೆಗೆ 20,000, ಕಾಲ್ತೋಡು ಸುಬ್ರಾಯ ಆಚಾರಿ ಮನೆಗೆ 25,000ರೂ. ಹಾಗೂ ಹೆರಂಜಾಲು ವಾಳಂಬಳ್ಳದ ಸೀತು ಎಂಬವರ ದನದ ಕೊಟ್ಟಿಗೆಗೆ 30,000ರೂ. ಹಾನಿ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕಮಲಶಿಲೆ ಗರ್ಭಗುಡಿಗೆ ನೀರು: ಕುಬ್ಜಾ ನದಿಯ ತಟದಲ್ಲಿರುವ ಪುರಾಣ ಪ್ರಸಿದ್ಧ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ಮಂಗಳವಾರ ಸಂಜೆ ವೇಳೆ ತುಂಬಿ ಹರಿದ ನದಿ ನೀರು ನುಗಿದ್ದು, ಇಡೀ ದೇವಾಲಯ ಜಲಾವೃತಗೊಂಡಿದೆ. ಈ ನಡುವೆ ಗರ್ಭಗುಡಿಗೆ ನುಗ್ಗಿದ ನೀರಿನಲ್ಲಿ ನೆರೆದ ಭಕ್ತರು ತೀರ್ಥಸ್ನಾನ ಮಾಡಿ ಪುನೀತ ಭಾವನೆ ಹೊಂದಿದರು.
ಕುಬ್ಝಾ ನದಿಯ ನೀರು ದೇವಿಯ ಪಾದ ತೊಳೆದಿದ್ದು, ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ತುಂಬಿದ ಕುಬ್ಜಾ ನದಿ, ದೇವಿಯ ಗರ್ಭಗುಡಿಗೆ ನುಗ್ಗಿ ಪಾದ ತೊಳೆಯುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ಈ ಕ್ಷಣಕ್ಕಾಗಿ ಕಾದುಕುಳಿತಿರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ.
ಕೆದೂರಿನಲ್ಲಿ ನಿಂತ ರೈಲು: ಮುಂಬೈಯಿಂದ ಮಂಗಳೂರಿಗೆ ತೆರಳುತಿದ್ದ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಇಂದು ಕೆದೂರು ಬಳಿ ರೈಲು ಹಳಿಯಲ್ಲಿ ಭಾರೀ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಚಾಲಕ ರೈಲನ್ನು ನಿಲ್ಲಿಸುವ ಮೂಲಕ ಯಾವುದೇ ಅಪಾಯವಾಗದಂತೆ ನೋಡಿಕೊಂಡಿದ್ದಾರೆ.
ಸುಮಾರು 20 ನಿಮಿಷಗಳ ಕಾಲ ರೈಲು ಹಳಿಯಲ್ಲಿ ನಿಂತಿದ್ದು, ನೀರು ತಗ್ಗಿದ ಬಳಿಕ ಚಾಲಕ ಅಲ್ಲಿಂದ ಮಂಗಳೂರಿನತ್ತ ರೈಲನ್ನು ಚಲಾಯಿಸಿ ಕೊಂಡು ಹೋಗಿದ್ದಾರೆ. ಚಾಲಕ ತೋರಿದ ಸಮಯಪ್ರಜ್ಞೆ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.