ಕಾಶ್ಮೀರಿಗಳನ್ನು ಬಿಡುಗಡೆಗೊಳಿಸಿ, ಅವರೂ ಸಂಭ್ರಮಾಚರಿಸಲಿ: ಬಿಜೆಪಿಗೆ ಒವೈಸಿ ಚಾಟಿ

Update: 2019-08-06 16:34 GMT

ಹೊಸದಿಲ್ಲಿ, ಆ.6: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಬಿಜೆಪಿಯು ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಲು ವಿಫಲವಾಗಿದ್ದು, ಸಾಂವಿಧಾನಿಕ ಭರವಸೆಯ ಉಲ್ಲಂಘನೆಯಲ್ಲಿ ನಿರತವಾಗಿದೆ ಎಂದು ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಒವೈಸಿ, “ಖಂಡಿತವಾಗಿಯೂ ಈ ಮಸೂದೆಯನ್ನು ನಾನು ವಿರೋಧಿಸುತ್ತೇನೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿರಬಹುದು. ಆದರೆ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಲು ವಿಫಲವಾಗಿದೆ” ಎಂದರು. ಬಿಜೆಪಿ ಸಂಸದರು ಇದೇ ದೀಪಾವಳಿ ಎನ್ನುತ್ತಾ ಸಂಭ್ರಮಾಚರಿಸುತ್ತಿದ್ದಾರೆ. ಎಲ್ಲಾ ಕಾಶ್ಮೀರಿಗಳನ್ನೂ ಬಿಡುಗಡೆಗೊಳಿಸಿ. ಅವರೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿ. ಅವರು ಹೊರಬರಲಿ. ಅವರು ಮೊಬೈಲ್ ಫೋನ್ ಕೂಡಾ ಬಳಸುವಂತಿಲ್ಲ. ಹಾಗಿದ್ದ ಮೇಲೆ ಸರಕಾರ ಹೇಳುವುದರಲ್ಲಿ ಅರ್ಥವಿದೆಯೇ ಎಂದು ಒವೈಸಿ ಪ್ರಶ್ನಿಸಿದರು.

ಈ ಮಧ್ಯೆ ಹೇಳಿಕೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಫಾರೂಕ್ ಅಬ್ದುಲ್ಲ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗಿಸುವ ನಿರ್ಧಾರವನ್ನು ಕೇಳಿದಾಗ ನಮ್ಮ ದೇಹವನ್ನು ಸೀಳಾಗಿಸಿದಂತಹ ಅನುಭವವಾಯಿತು ಎಂದು ಹೇಳಿದ್ದಾರೆ. ಈ ರೀತಿಯ ಭಾರತವನ್ನು ನಾನೆಂದೂ ಕಂಡಿಲ್ಲ, ಭಾರತ ನವ್ಮೆುಲ್ಲರದ್ದಾಗಿತ್ತು. ಹಿಂದೂ, ಮುಸ್ಲಿಮ್, ಸಿಖ್ ಎಲ್ಲರದ್ದಾಗಿತ್ತು ಎಂದು ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News