ತುಂಬೆ ವೆಂಟೆಡ್ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ
ಬಂಟ್ವಾಲ, ಆ. 6: ಪಶ್ಚಿಮ ಘಟ್ಟ, ಜಲಾನಯನ ಪ್ರದೇಶ ಹಾಗೂ ದ.ಕ. ಜಿಲ್ಲೆಯಾದ್ಯಂತ ಸೋಮವಾರದಿಂದ ಧಾರಾಕಾರ ಮಳೆ ಮುಂದು ವರಿದಿದ್ದು, ನೇತ್ರಾವತಿ ನದಿ ಭೋರ್ಗರೆಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದ ತುಂಬೆ ವೆಂಟೆಡ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.
ತುಂಬೆ ವೆಂಟೆಡ್ ಡ್ಯಾಂ ಭರ್ತಿಯಾಗಿದ್ದು, ಇಲ್ಲಿನ 30 ಡ್ಯಾಂ ಬಾಗಿಲಗಳ ಪೈಕಿ 29 ಬಾಗಿಲ ಅನ್ನು ಇಂದು ಬೆಳಿಗ್ಗಿನಿಂದಲೇ ತೆರೆಯಲಾಗಿದೆ. ಡ್ಯಾಂನ ಕೊನೆಯ ಬಾಗಿಲ ಬದಿಯಲ್ಲಿ ಧರೆ ಕುಸಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ ಎಂದು ಡ್ಯಾಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ನೇತ್ರಾವತಿ ನೀರಿನ ಮಟ್ಟ 7.9 ಮೀ.:
ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀಟರ್. ಹೊರಹರಿವು ಹೊರತು ಪಡಿಸಿ ಮಂಗಳವಾರ ಸಂಜೆಯ ವೇಳೆಗೆ ನದಿಯಲ್ಲಿ 7.9.ಮೀಟರ್ ನೀರು ದಾಖಲಾಗಿದೆ. ಬೆಳಿಗ್ಗೆ 8 ಮೀಟರ್‍ನಷ್ಟು ನೀರು ದಾಖಲಾಗಿದ್ದವು. ಯಾವುದೇ ಕ್ಷಣದಲ್ಲೂ ನೆರೆ ಏರುವ ಸಾಧ್ಯತೆ ಯಿರುವುದರಿಂದ ನದಿ ತೀರದ ಜನರು ಎಚ್ಚರವಹಿಸುವುದು ಅಗತ್ಯವಾಗಿದೆ. ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ನದಿಪಾತ್ರಗಳಲ್ಲಿರುವ ಜನರ ಎಚ್ಚರ ಅಗತ್ಯ ಎಂದು ಡ್ಯಾಂ ಸಿಬ್ಬಂದಿ ತಿಳಿಸಿದ್ದಾರೆ.
ಭರ್ತಿಯಾದ ಶಂಭೂರು ಎಎಂಆರ್:
ಶಂಭೂರು ಎಎಂಆರ್ ಡ್ಯಾಂ ಭರ್ತಿಯಾಗಿದ್ದು, ಇಲ್ಲಿನ 30 ಗೇಟ್‍ಗಳ ಪೈಕಿ 10 ಗೇಟ್ ಅನ್ನು ಮಂಗಳವಾರ ಬೆಳಗ್ಗೆಯೇ ತೆರವು ಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.