ಅಸತ್ಯ ಮಾಹಿತಿಯನ್ನು ಜನತೆಗೆ ತಲುಪಿಸಬೇಡಿ: ಶಿವಾನಂದ ತಗಡೂರು

Update: 2019-08-06 17:05 GMT

ಕಾಪು: ಪತ್ರಕರ್ತರು ಸುದ್ದಿ ಕೊಡುವ ಭರದಲ್ಲಿ ಅಪೂರ್ಣ ಮತ್ತು ಅಸತ್ಯವಾದ ಮಾಹಿತಿಯನ್ನು ಜನತೆಗೆ ತಲುಪಿಸಬಾರದು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. 

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಪು ವೀರಭದ್ರ ಸಭಾಭವನದಲ್ಲಿ ಆ. 6ರಂದು ಜರಗಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಮ್ಮಿಲನ, ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸುದ್ದಿಯ ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡುವುದು ಪತ್ರಕರ್ತನ ಜವಾಬ್ದಾರಿಯಾಗಿದೆ. ಅಸತ್ಯ ಸುದ್ದಿಗಳಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.  ನೈಜ ಸುದ್ದಿಯಿಂದ ಸಮಾಜ ಮತ್ತು ಮಾಧ್ಯಮಗಳ ನಡುವಿನ ವಿಶ್ವಾಸರ್ಹತೆ ವೃದ್ಧಿಯಾಗಲು ಸಾಧ್ಯ ಎಂದರು. 

ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿ, ಪತ್ರಕರ್ತರು, ಸರ್ಕಾರ ಮತ್ತು ಜನಪ್ರತಿನಿಧಿಗಳ ನಡುವಿನ ಕೊಂಡಿಯಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖದ್ದಾಗಿದೆ ಎಂದರು. 

ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮದನ ಗೌಡ ಅವರು ಗ್ರಾಮೀಣ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳು, ಸಮೂಹ ಮಾಧ್ಯಮ ಮತ್ತು ಸ್ವಯಂ ನೀತಿ ಸಂಹಿತೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಇದೇ ಸಂದರ್ಭ  ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಎಚ್.ಬಿ. ಮದನ ಗೌಡ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯ ನಿರತ ಪತ್ರಕರ್ತರ ಸಂಘದ ಕಾಪು ತಾಲ್ಲೂಕು ಅಧ್ಯಕ್ಷ ಪ್ರಮೋದ್ ಸುವರ್ಣ  ಅಧ್ಯಕ್ಷತೆ ವಹಿಸಿದ್ದರು. 

ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಮಂಜನ ಬೈಲು, ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಉಡುಪಿ ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ ವರ್ಕಾಡಿ  ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸಂಚಾಲಕ ಪುಂಡಲೀಕ ಮರಾಠೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಾದಿರಾಜ್ ರಾವ್ ನಡಿಮನೆ ವಂದಿಸಿದರು. ಉಪಾಧ್ಯಕ್ಷ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News