'ಸಮಸ್ಯೆಯ ವಿರುದ್ಧ ಬರೆದೆನೇ ವಿನಃ ಸಮುದಾಯದ ವಿರುದ್ಧ ಬರೆದಿಲ್ಲ'
ಮಂಗಳೂರು, ಆ. 6: ನಾನು ಸಮಸ್ಯೆಯ ವಿರುದ್ಧ ಕಥೆ-ಕಾದಂಬರಿ ಬರೆದೆನೇ ವಿನಃ ಯಾವತ್ತೂ ಕೂಡ ಸ್ವಸಮುದಾಯದ ವಿರುದ್ಧ ಬರೆದವನಲ್ಲ. ಸಾಹಿತ್ಯದ ಗಂಧಗಾಳಿಯೇ ಇಲ್ಲದ ಕುಟುಂಬದಲ್ಲಿ ಬೆಳೆದ ನನಗೆ ಮುಸ್ಲಿಂ ಸಮುದಾಯದ ಹೆಣ್ಮಕ್ಕಳು, ಬಡವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬಂತು. ಆ ಸಮಸ್ಯೆಯನ್ನು ಸಾಹಿತ್ಯ ಜಗತ್ತಿಗೆ ತೆರೆದಿಡುವ ಪ್ರಯತ್ನವನ್ನಷ್ಟೇ ನಾನು ಮಾಡಿದೆ ಎಂದು ಹಿರಿಯ ಸಾಹಿತಿ, ಕಥೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಹೇಳಿದರು.
ಬ್ಯಾರಿ ಲೇಖಕರು ಮತ್ತು ಕಲಾವಿದರ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಫಕೀರ್ ಮುಹಮ್ಮದ್ ಕಟ್ಪಾಡಿಯೊಂದಿಗೆ ಅವರ ಸ್ವಗೃಹದಲ್ಲಿ ರವಿವಾರ ಸಂಜೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಮದುವೆಯ ಸಂದರ್ಭ ವಧು ಅಳುತ್ತಿರುವುದು ಸಾಮಾನ್ಯವಾಗಿತ್ತು. ಮನೆಯ ಇತರ ಎಲ್ಲರೂ ಸಂಭ್ರಮದಲ್ಲಿರುವಾಗ ವಧು ಯಾಕೆ ಅಳುವುದು ಎಂಬುದು ನನಗೆ ಕಾಡಿದ ಬಹುದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೆ ಮದುವೆಗೆ ಮುನ್ನ ವಧು-ವರರು ಪರಸ್ಪರ ಮುಖಾಮುಖಿ ಯಾಗುತ್ತಿರಲಿಲ್ಲ. ಇದರ ಬಗ್ಗೆ ನಾನು ಬರೆದೆ. ಅದರ ಪರಿಣಾಮವೋ ಏನೋ, ವಧು-ವರರು ಪರಸ್ಪರ ನೋಡಿ ಒಪ್ಪಿಗೆ ಸೂಚಿಸುವ ಕ್ರಮ ರೂಢಿಗೆ ಬಂತು. ಹೀಗೆ ಸಾಹಿತ್ಯದ ಮೂಲಕ ಇಂತಹ ಸಮಸ್ಯೆಗೆ ಒಂದಷ್ಟು ಮುಕ್ತಿ ಕಾಣಿಸಿದ ತೃಪ್ತಿ ನನಗೆ ಇದೆ ಎಂದು ಕಟ್ಪಾಡಿ ನುಡಿದರು.
ಆ ಕಾಲದಲ್ಲಿ ಸಾಹಿತ್ಯದ ಅಭಿರುಚಿ ಇದ್ದವರೂ ಇದ್ದರು. ನಾನು ಕಥೆ-ಕಾದಂಬರಿ ಬರೆದಾಗ ಅದರ ಬಗ್ಗೆ ವಿರೋಧ ವ್ಯಕ್ತಪಡಿಸಿದವರಷ್ಟೇ ಸಹಮತ ವ್ಯಕ್ತಪಡಿಸುವವರೂ ಇದ್ದರು. ಸರಿ ಎನ್ನುವವರಿದ್ದರು. ನನ್ನ ಕಥೆಗಳಾದ ‘ನಿಖಾಹ್, ಗೋರಿಕಟ್ಟಿ ಕೊಂಡವರು, ನೋಂಬು, ಒಂದು ಹಗಲು-ಒಂದು ರಾತ್ರಿ’ ಅಪಾರವಾಗಿ ಚರ್ಚೆಗೊಳಗಾಯಿತು ಎಂದ ಕಟ್ಪಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾರಿ-ಮುಸ್ಲಿಂ ಯುವ ಸಾಹಿತಿಗಳ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿಯವರನ್ನು ‘ಮೇಲ್ತೆನೆ’ ವತಿಯಿಂದ ಸನ್ಮಾನಿಸಲಾಯಿತು. ಯುವ ಲೇಖಕ ಇಸ್ಮತ್ ಪಜೀರ್ ಸಂವಾದ ನಡೆಸಿಕೊಟ್ಟರು. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಹಂಝ ಮಲಾರ್, ಸದಸ್ಯ ಬಶೀರ್ ಅಹ್ಮದ್ ಕಿನ್ಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿ, ವಂದಿಸಿದರು.