ಅನಧಿಕೃತ ಪಿಜಿಗಳಿಂದ ಶಿಕ್ಷಣ ಸಂಸ್ಥೆಗಳ ಹೆಸರಿಗೆ ಕಳಂಕ-ರಾಧಾಕೃಷ್ಣ ಬೋರ್ಕರ್

Update: 2019-08-06 17:22 GMT

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿನ ಖಾಸಗಿ ಕಾಲೇಜ್‍ಗಳ ಪರಿಸರದಲ್ಲಿರುವ ಪಿಜಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಹಲವಾರು ನ್ಯೂನತೆಗಳಿದ್ದು, ಅನಧಿಕೃತ ಪಿಜಿಗಳಿಂದ ಶಿಕ್ಷಣ ಸಂಸ್ಥೆಗಳ ಹೆಸರು ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿರುವ ಪಿಜಿಗಳ ಸಮಗ್ರ ಸಮೀಕ್ಷೆ ನಡೆಸಬೇಕು ಎಂದು ತಾಲೂಕು ಪಂಚಾತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಸೂಚಿಸಿದರು.

ಅವರು ಮಂಗಳವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಜಿಗಳು ನಡೆಸಬೇಕಾದರೆ ನಿಯಮ, ಸೌಲಭ್ಯಗಳನ್ನು ಪಾಲಿಸುವವರಿಗೆ ಮಾತ್ರ ಪಿಜಿ ನಡೆಸಲು ಅವಕಾಶ ನೀಡಬೇಕು ಎಂದು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ನಗರಸಭಾ ಇಂಜಿನಿಯರ್ ಶ್ರೀಧರ್ ಅವರು ಈಗಾಗಲೇ ಅನಧಿಕೃತ ಪಿಜಿಗಳ ಬಗ್ಗೆ ಕಾರ್ಯಾಚರಣೆ ನಡೆಸಿ ವಿವರ ಪಡೆದುಕೊಂಡು ಅವರಿಗೆ ನೋಟೀಸ್ ನೀಡಲಾಗಿದೆ. ಅಲ್ಲಿನ ವಿದ್ಯಾರ್ಥಿಗಳ ಹಾಜರಿ, ಸಮಯ ಪಾಲನೆ, ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪುತ್ತೂರು ನಗರಸಭಾ ವ್ಯಾಪ್ತಿಯಲಿಲ ವಾಹನ ಪಾರ್ಕಿಂಗ್ ಸಮಸ್ಯೆಗಳಾಗಿದ್ದು, ಅಲ್ಲಲ್ಲಿ ಪೊಲೀಸರು ಕೇಸು ಹಾಕುತ್ತಿದ್ದಾರೆ. ಕೇಸು ಹಾಕುವುದು ತಪ್ಪಲ್ಲ ಆದರೆ ಅದಕ್ಕೂ ಮೊದಲು ಜನರಿಗೆ ವಾಹನ ಪಾರ್ಕಿಂಗ್ ಜಾಗವನ್ನು ತೋರಿಸಬೇಕು ಎಂದು ಹೇಳಿದ ಅಧ್ಯಕ್ಷರು ಕಟ್ಟಡ ನಿರ್ಮಾಣದ ವೇಳೆಯಲ್ಲಿ ವಾಹನ ಪಾರ್ಕಿಂಗ್ ಜಾಗವನ್ನು ತೋರಿಸಿ ಪರವಾನಿಗೆ ಪಡೆದು ಬಳಿಕ ಅಲ್ಲಿ ಅಂಗಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ನಗರ ಪೊಲೀಸ್ ಠಾಣೆಯ ಕ್ರೈಮ್ ಎಸ್‍ಐ ಚೆಲುವಯ್ಯ ಅವರು ಪುತ್ತೂರಿನಲ್ಲಿ ಪಾರ್ಕಿಂಸ್ ಸಮಸ್ಯೆ ನಿವಾರಿಸಲು ಸಹಾಯಕ ಕಮೀಷನರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ವಾರದಲ್ಲಿ ಇಂತಿಷ್ಟು ದಿನ ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಹನ ನಿಲ್ಲಿಸುವ ಬಗ್ಗೆ ಚಿಂತನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಪಾರ್ಕಿಂಗ್ ಸಮಸ್ಯೆಗಳಿಲ್ಲ. ಇತರ ವಾಹನಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಗರಸಭೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ಮಳೆ ಹಾನಿ ಅನುದಾನದ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶಾಲಾ ಸಮೀಪದಲ್ಲಿ ಕಿರು ಸೇತುವೆ ನಿರ್ಮಿಸಲು 16 ಶಾಲೆಗಳು ಅರ್ಜಿ ಸಲ್ಲಿಸಿದೆ ಎಂದು ಪ್ರಭಾರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಮಾಹಿತಿ ನೀಡಿದರು.

ಕಿರು ಸೇತುವೆ ನಿರ್ಮಾಣಕ್ಕೆ ಈಗಾಗಲೇ ರೂ.5.84 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್ ಅವರು ಮಾಹಿತಿ ನೀಡಿದರು.

ಚೆಲ್ಯಡ್ಕ ಮುಳುಗು ಸೇತುವೆಗೆ ಪರ್ಯಾಯವಾಗಿ ಸರ್ವಋತು ಸೇತುವ ಎನಿರ್ಮಾಣಕ್ಕಾಗಿ ನಬಾರ್ಡ್ ಯೋಜನೆಯಡಿ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಅನುಮೋದನೆಯಾದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ಬಳಿಕ ಸಂಬಂಧಪಟ್ಟ ಇಲಾಖೆಯಿಂದ ಹಸ್ತಾಂತರ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ರಾಜಾರಾಮ್ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News