ಮಂಗಳೂರು: ಆ. 10-11ರಂದು ಬಿ.ವಿ. ಕಕ್ಕಿಲ್ಲಾಯ ಶತಾಬ್ಧಿ ಕಾರ್ಯಕ್ರಮ
ಮಂಗಳೂರು, ಆ.7: ಹಿರಿಯ ಸ್ವಾತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಧುರೀಣ, ರಾಜ್ಯಸಭೆ ಮತ್ತು ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಗಮನ ಸೆಳೆದ, ಸಾಮಾಜಿಕ ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ, ಲೇಖಕರಾಗಿ ನಾಡು-ನುಡಿಗೆ ಸುದೀರ್ಘಕಾಲ ಸೇವೆ ಸಲ್ಲಿಸಿದ್ದ ಬಿ.ವಿ. ಕಕ್ಕಿಲ್ಲಾಯ (1919-2012) ಅವರ ಜನ್ಮ ಶತಾಬ್ಧಿಯ ಪ್ರಯುಕ್ತ ಆ.10 ಮತ್ತು 11ರಂದು ನಗರದ ಬಲ್ಮಠದ ಸಹೋದಯ ಸಭಾಂಗಣದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ವಿಚಾರಗೋಷ್ಠಿ, ಉಪನ್ಯಾಸ, ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿ.ವಿ. ಕಕ್ಕಿಲ್ಲಾಯರ ಪುತ್ರ ಡಾ. ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳೂರಿನ ಸಮದರ್ಶಿ ವೇದಿಕೆ, ಬೆಂಗಳೂರಿನ ಹೊಸತು ಪತ್ರಿಕೆ ಮತ್ತು ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಹಾಗೂ ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿ. ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಆ.10ರಂದು ಬೆಳಗ್ಗೆ 10 ಗಂಟೆಗೆ ಹಿರಿಯ ಕಾರ್ಮಿಕ ನಾಯಕಿ, ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ಉದ್ಘಾಟಿಸಲಿದ್ದಾರೆ. ಬಳಿಕ ಅವರು ‘ಭಾರತದ ಸ್ವಾತಂತ್ರ ಸಂಗ್ರಾಮ ಹಾಗೂ ರಾಷ್ಟ್ರ ನಿರ್ಮಾಣಗಳಲ್ಲಿ ದುಡಿಯುವ ವರ್ಗದ ಚಳುವಳಿಯ ಪಾತ್ರ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ ಎಂದರು.
ಪೂರ್ವಾಹ್ನ 11 ಗಂಟೆಗೆ ಡಾ. ಕನ್ಹಯ್ಯ ಕುಮಾರ್ ‘ಕವಲುದಾರಿಯಲ್ಲಿ ಭಾರತದ ಯುವಜನರು’ ಎಂಬ ವಿಷಯದಲ್ಲಿ ಮಾತನಾಡಲಿದ್ದು, ಡಾ. ಅಮರ್‌ಜೀತ್ ಕೌರ್ ಇದಕ್ಕೆ ಪ್ರತಿಕ್ರಿಯಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಳಲೆ ಪಾರ್ಥಸಾರಥಿ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿ’ ಎಂಬ ವಿಷಯದಲ್ಲಿ ಮಾತನಾಡಲಿದ್ದು, ದಿನೇಶ್ ಅಮೀನ್ ಮಟ್ಟು ಇದಕ್ಕೆ ಪ್ರತಿಕ್ರಿಯಿಸಲಿದ್ದಾರೆ. ಸಂಜೆ 4 ಗಂಟೆಗೆ ಪ್ರೊ. ಆನಂದ ತೇಲ್ದುಂಬೆ ‘ದಮನಿತರ ಹೋರಾಟಗಳು: ಸಿದ್ಧಾಂತ ಮತ್ತು ಕ್ರಿಯೆ’ ಎಂಬ ವಿಷಯದಲ್ಲಿ ಮಾತನಾಡಲಿದ್ದು, ಡಾ. ಕನ್ಹಯ್ಯ ಕುಮಾರ್ ಪ್ರತಿಕ್ರಿಯಿಸಲಿದ್ದಾರೆ. ಈ ಮೂರು ಚರ್ಚಾ ಗೋಷ್ಠಿಯಲ್ಲೂ ತಲಾ ಒಂದೊಂದು ಗಂಟೆ ಸಭಿಕರೊಂದಿಗೆ ಸಂವಾದವೂ ನಡೆಯಲಿದೆ ಎಂದು ಹೇಳಿದರು.
ಆ.11ರಂದು ಬೆಳಗ್ಗೆ 10 ಗಂಟೆಗೆ ಡಾ. ಸಿದ್ಧನಗೌಡ ಪಾಟೀಲ್ ‘ಬಿ.ವಿ.ಕಕ್ಕಿಲ್ಲಾಯ: ಮಲಬಾರಿನಿಂದ ಕರ್ನಾಟಕ ವಿಧಾನಸಭೆಯವರೆಗೆ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಬೆಳಗ್ಗೆ 10:30ಕ್ಕೆ ‘ಕರ್ನಾಟಕದಲ್ಲಿ ಭೂ ಸುಧಾರಣೆ: ಎಲ್ಲಿಂದ ಎಲ್ಲಿಗೆ ?’ ಎಂಬ ವಿಷಯದಲ್ಲಿ ನಡೆಯುವ ಗೋಷ್ಠಿಯಲ್ಲಿ ಪ್ರೊ.ಮುಜಾಫರ್ ಅಸಾದಿ ಮತ್ತು ಪಿ. ವಿ.ಲೋಕೇಶ್ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ‘ಕನ್ನಡದಲ್ಲಿ ತತ್ವಶಾಸ್ತ್ರ, ಇತಿಹಾಸ ಮತ್ತು ಅರ್ಥಶಾಸ್ತ್ರದ ಬರಹಗಳು’ ಎಂಬ ವಿಷಯದಲ್ಲಿ ಡಾ. ಟಿ.ಎಸ್. ವೇಣುಗೋಪಾಲ್, ಡಾ. ವಿಜಯ ಪೂಣಚ್ಚ ತಂಬಂಡ, ಕಳಲೆ ಪಾರ್ಥಸಾರಥಿ ಮಾತನಾಡಲಿದ್ದಾರೆ. ಡಾ.ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ‘ಕಲೆಯ ಮರು ನಿರೂಪಣೆ’ ಕುರಿತಯ ಟಿಎಂ ಕೃಷ್ಣ ‘ಜಾತಿಗಳಾಚೆ’ ಮತ್ತು ನೂರ್ ಜಹೀರ್ ‘ಲಿಂಗ ತಾರತಮ್ಯಗಳಾಚೆ’ ವಿಷಯದಲ್ಲಿ ಮಾತನಾಡಲಿದ್ದಾರೆ. ಬಳಿಕ ಸಭಿಕರೊಂದಿಗೆ ಸಂವಾದವಿದೆ. ಸಂಜೆ 6 ಗಂಟೆಗೆ ನಡೆಯುವ ಸಮಾರೋಪದಲ್ಲಿ ಬಿನೋಯ್ ವಿಶ್ವಂ, ಸಾತಿ ಸುಂದರೇಶ್, ವಿ.ಕುಕ್ಯಾನ್, ಬಿ.ಕೆ.ಕೃಷ್ಣಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.
ಎರಡೂ ದಿನ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಅಲ್ಲದೆ ಮರುಮುದ್ರಣಗೊಂಡ ಬಿ.ವಿ.ಕಕ್ಕಿಲ್ಲಾಯ ಅವರ ಆತ್ಮಕಥೆ ‘ಬರೆಯದ ದಿನಚರಿಯ ಮರೆಯದ ಪುಟಗಳು’ ಮತ್ತು ‘ಕಾಲ್‌ಮಾರ್ಕ್ಸ್: ಬದುಕು ಬರಹ’ ಮತ್ತು ಫೆಡರಿಕ್ ಎಂಗೆಲ್ಸ್: ಜೀವನ-ಚಿಂತನ’ ಕೃತಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮದರ್ಶಿ ವೇದಿಕೆಯ ನಾಗೇಶ್ ಕಲ್ಲೂರು, ವಿ.ಕುಕ್ಯಾನ್, ಎಚ್.ವಿ.ರಾವ್, ಎಐಟಿಯುಸಿ ನಾಯಕ ಕರುಣಾಕರ್ ಉಪಸ್ಥಿತರಿದ್ದರು.