ಕರಾವಳಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ: ಡಿಸಿ
ಮಂಗಳೂರು, ಆ.7: ದ.ಕ. ಹಾಗೂ ಉಡುಪಿ ಜಿಲ್ಲೆಗಳು ನೈಸರ್ಗಿಕದತ್ತವಾದ ಪ್ರಾಕೃತಿಕ, ಪಾರಂಪರಿಕ ಸಾಂಸ್ಕೃತಿಕ ಚೆಲುವನ್ನು ಹೊಂದಿದೆ. ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಪ್ರಕಟಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕುರಿತು ‘ಕನೆಕ್ಟ್-2019’ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿದ್ದರೂ ಪ್ರವಾಸೋದ್ಯಮ ಬೆಳೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಎರಡು ಜಿಲ್ಲೆಗಳ ಉದ್ದಿಮೆದಾರರು ಮತ್ತು ಸಣ್ಣ ಪ್ರಮಾಣದ ಹೂಡಿಕೆದಾರರು ಈ ಪ್ರವಾಸೋದ್ಯಮಕ್ಕೆ ಸಹಾಯಕಾರಿಯಾದ ವಾತಾವರಣವನ್ನು ಉದ್ಯಮದ (ಹೊಟೇಲ್, ಟ್ರ್ಯಾವಲರ್ಸ್ ಮತ್ತು ಹೋಮ್ ಸ್ಟೇ) ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಪ್ರವಾಸೋದ್ಯಮಕ್ಕೆ ಸಹಕಾರ ನೀಡಬೇಕು ಎಂದರು.
ಬೆಂಗಳೂರಿನಲ್ಲಿ ಆ.25ರಿಂದ 27ರವರೆಗೆ ನಡೆಯುವ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರ್ಯಾವಲ್ ಎಕ್ಸ್‌ಪೋ-2019 ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅನೇಕ ವಿಚಾರಗಳು ವಿನಿಮಯವಾಗಲಿದೆ. ಕರಾವಳಿಯನ್ನು ಪ್ರವಾಸೋದ್ಯ ಮದಲ್ಲಿ ಮತ್ತಷ್ಟು ಸುಂದರವಾಗಿಸುವುದಕ್ಕೆ ಸಹಕಾರಿಯಾಗಲಿದೆ. ಎಲ್ಲ ಹೂಡಿಕೆದಾರರು, ಸಣ್ಣ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ಉದ್ಯಮಿಗಳು ಭಾಗವಹಿಸಿ, ಆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಪ್ರವಾಸೋದ್ಯಮ ಇಲಾಖೆ ಜಂಟಿ ಆಯುಕ್ತ ಡಾ.ಎಸ್.ನವೀನ್ ಕುಮಾರ್ ರಾಜು ಮಾತನಾಡಿ, ಕರ್ನಾಟಕ ಇಂಟರ್‌ನ್ಯಾಷನಲ್ ಟ್ರ್ಯಾವಲ್ ಎಕ್ಸ್‌ಪೋ-2019 ಕಾರ್ಯಕ್ರಮವು ಸುಮಾರು ಎರಡು ವರ್ಷಗಳ ನಿರಂತರ ಪರಿಶ್ರಮದಿಂದ ತಯಾರಿ ನಡೆಯುತ್ತಿದ್ದು, ಪ್ರವಾಸೋದ್ಯಮಕ್ಕೆ ಹೊಸ ಆಯಾಮ ತಂದು ಕೊಡುವ ಕನಸಿನ ಕಾರ್ಯಕ್ರಮ ಇದಾಗಿದೆ ಎಂದರು.
ಕಾರ್ಯಕ್ರಮದ ಮೂಲ ಉದ್ದೇಶವೇ ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಮತ್ತು ಉದ್ದಿಮೆದಾರಿಗೆ ತಮ್ಮ ಉದ್ಯಮವನ್ನು ವಿವಿಧ ದೇಶ ಮತ್ತು ರಾಜ್ಯಗಳ ಪ್ರವಾಸಿಗಳಿಗೆ ಪರಿಚಯಿಸುವುದಕ್ಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜನ ಮಾಡುವುದಕ್ಕೆ ಒಳ್ಳೆಯ ವೇದಿಕೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಉದಯ ಶೆಟ್ಟಿ, ಉಡುಪಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕಿ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ರೈ, ಹೊಟೇಲ್ ಅಸೋಸಿಯಶನ್‌ನ ದ.ಕ. ಜಿಲ್ಲಾ ಅಧ್ಯಕ್ಷ ಕುಡಿಪಿ ಜಗದೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.