ಮಳೆಯ ರಜೆ ಮದ್ರಸಗಳಿಗೂ ಅನ್ವಯವಾಗಲಿ: ಅಲಿ ಹಸನ್ ಕುದ್ರೋಳಿ
ಮಂಗಳೂರು, ಆ.7: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗರೂಕತಾ ಕ್ರಮವಾಗಿ ಗಾಳಿ-ಮಳೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯು ತನ್ನ ವಿಶೇಷಾಧಿಕಾರ ಬಳಸಿಕೊಂಡು ಶಾಲಾ-ಕಾಲೇಜುಗಳಿಗೆ ನೀಡಲಾಗುವ ರಜೆಯು ಮದ್ರಸಗಳಿಗೂ ಅನ್ವಯ ಗೊಳ್ಳುವಂತೆ ಮಾಡಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿಹಸನ್ ಕುದ್ರೋಳಿ ಆಗ್ರಹಿಸಿದ್ದಾರೆ.
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಇಂತಹ ಸಂದರ್ಭದಲ್ಲಿ ರಜೆ ನೀಡುವುದು ಸಾಮಾನ್ಯವಾಗಿದೆ. ಬಹುತೇಕ ಶಿಕ್ಷಣ ಸಂಸ್ಥೆಗಳು ರಜೆ ನೀಡಿ ಜಿಲ್ಲಾಧಿಕಾರಿಯ ಆದೇಶವನ್ನು ಪಾಲಿಸುತ್ತದೆ. ಅಂಗನವಾಡಿ ಮಕ್ಕಳಿಗೂ ರಜೆ ನೀಡಲಾಗುತ್ತದೆ. ಆದರೆ, ಮದ್ರಸಗಳಿಗೆ ಮಾತ್ರ ರಜೆ ನೀಡುವ ಪರಿಪಾಠ ಜಿಲ್ಲೆಯಲ್ಲಿ ಕಂಡು ಬರುತ್ತಿಲ್ಲ. ಜಿಲ್ಲಾಧಿಕಾರಿಯು ಶಾಲಾ-ಕಾಲೇಜು ಎಂದಷ್ಟೇ ಉಲ್ಲೇಖಿಸಿದ ಕಾರಣ ಮಸೀದಿ -ಮದ್ರಸದ ಆಡಳಿತ ಕಮಿಟಿಗಳು, ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಗಳು ಕೂಡ ಮದ್ರಸದ ಮಕ್ಕಳಿಗೆ ರಜೆ ನೀಡಲು ಹಿಂದೇಟು ಹಾಕುವುದು ಕಂಡು ಬರುತ್ತದೆ. ಇದು ಸರಿಯಾದ ಕ್ರಮವಲ್ಲ. ಪ್ರಕೃತಿ ವಿಕೋಪ ಸಂದರ್ಭ ಮದ್ರಸದ ಮಕ್ಕಳಿಗೂ ರಜೆ ಅನ್ವಯ ಆಗಬೇಕಿದೆ. ಇದನ್ನು ಮದ್ರಸ ಕಮಿಟಿಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಅಲ್ಲದೆ ಜಿಲ್ಲಾಧಿಕಾರಿಯು ಮುಂದಿನ ಆದೇಶಗಳಲ್ಲಿ ಸ್ಪಷ್ಟ ಸೂಚನೆ ಅಥವಾ ನಿರ್ದೇಶನ ನೀಡಬೇಕು ಎಂದು ಅಲಿ ಹಸನ್ ಒತ್ತಾಯಿಸಿದ್ದಾರೆ.