ಶಿಕ್ಷಕ ಪ್ರಶಾಂತ್ ಅನಂತಾಡಿಗೆ 'ಯುವ ಸಾಧಕ ಪ್ರಶಸ್ತಿ-2019'
ಪುತ್ತೂರು: ಯುವ ವಾಹಿನಿ ಕೇಂದ್ರ ಸಮಿತಿಯ ವತಿಯಿಂದ ನೀಡಲಾಗುತ್ತಿರುವ ಯುವ ವಾಹಿನಿ ಯುವ ಸಾಧಕ ಪ್ರಶಸ್ತಿ-2019ಕ್ಕೆ ಪುತ್ತೂರು ಹಾರಾಡಿ ಸರ್ಕಾರಿ ಶಾಲೆಯ ಆಂಗ್ಲಮಾಧ್ಯಮ ವಿಭಾಗದ ಶಿಕ್ಷಕ ಪ್ರಶಾಂತ್ ಅನಂತಾಡಿ ಆಯ್ಕೆಯಾಗಿದ್ದಾರೆ. ಎ.11ರಂದು ಪುತ್ತೂರಿನಲ್ಲಿ ನಡೆಯಲಿರುವ ಯುವವಾಹಿನಿ ವಾರ್ಷಿಕ ಮಹಾ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ರಂಗಭೂಮಿ, ಸಂಗೀತ, ಸಾಹಿತ್ಯ, ನಾಟಕ ರಚನೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಪ್ರಶಾಂತ್ ಅನಂತಾಡಿ ಅವರು ಮಕ್ಕಳ ಜಾತ್ರೆ, ಮುಖಾಮುಖಿ, ಹಸಿವಿನ ಹಾಡು, ವನಮಾಲಿ, ಅಂಬಲಿ ರಾಕ್ಷಸನ ಕಂಬಳಿ ಸಹಿತ ಅನೇಕ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಇವರ ಮಾರಿಕಳೆ ನಾಟಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಪ್ರದರ್ಶನಗೊಂಡಿದೆ. ಕೇಜ್ ಸ್ಕೂಲ್, ಚಿನ್ನೂಸ್ ಜರ್ನಲ್, ಎ ಟೋಲ್ಡ್ ಸ್ಟೋರಿ, ಮ್ಯೂಸಿಕ್ ಮ್ಯಾಸ್ಟ್ರೋ ಎಂಬ ಇಂಗ್ಲೀಷ್ ನಾಟಕಗಳನ್ನು ರಚಿಸಿದ್ದಾರೆ.
ತುಳು ಅಕಾಡಮಿಯ ಪ್ರಕಟಣೆಯಲ್ಲಿ ಇವರ `ಕಡಲ ಕರೆತ ಕಲೆತ ಕೊಡಿ ಕಮಲಾದೇವಿ ಚಟ್ಟೋಪಾಧ್ಯಾಯ' ಕೃತಿ ಪ್ರಕಟಗೊಂಡಿದೆ. ಅಲ್ಲದೆ ಇವರ ಎರಡು ಕನ್ನಡ ನಾಟಕ ಹಾಗೂ ಒಂದು ತುಳು ನಾಟಕವನ್ನು ತುಳು ಅಕಾಡಮಿ ಪ್ರಟಕಗೊಳಿಸಿದೆ.
ರಂಗ ಕಲಾವಿದಾಗಿಯೂ ತೊಡಗಿಸಿಕೊಂಡಿರುವ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಗೃತಿ ಬೀದಿ ನಾಟಕಗಳಾದ `ಸ್ಪರ್ಶ' ಮತ್ತು `ನೋಟ ಮೂಟೆ ಕೆಳಗಿಳಿಸಿ' ಹಾಗೂ ಸ್ವಚ್ಚತೆಗೆ ಸಂಬಂಧಿಸಿದಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪ್ರದರ್ಶಿತ `ಕಸ ಸಮಸ್ಯಾ ನಾಟಕಂ' ನಾಟಕ ಸೇರಿದಂತೆ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಪ್ರಸ್ತುತ ಹಾರಾಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.