ಹಲವು ವಿಘ್ನಗಳ ನಡುವೆ ಮಂಗಳೂರು ತಲುಪಿದ ಕುವೈತ್‌ನ ಉದ್ಯೋಗ ವಂಚಿತರು
ಮಂಗಳೂರು, ಆ.7: ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ಕಳೆದ ಏಳೆಂಟು ತಿಂಗಳುಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಕರಾವಳಿಯ 34 ಸಂತ್ರಸ್ತರು ಹಲವು ಏಳು-ಬೀಳುಗಳ ನಡುವೆಯೂ ಮಂಗಳೂರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತ್ರಸ್ತರ ಪೈಕಿ ಕೊನೆಯ ಹಂತದ ಎಂಟು ಮಂದಿಯ ತಂಡವು ಬುಧವಾರ ನಸುಕಿನ ಜಾವ 1:30ಕ್ಕೆ ಮಂಗಳೂರಿನ ಮಿಲಾಗ್ರಿಸ್ ಸಮೀಪ ಬಂದಿಳಿಯಿತು. ಬಸ್‌ನಿಂದ ಕೆಳಗಿಳಿದ ತಕ್ಷಣವೇ ನೂರಾರು ನೋವುಗಳ ಮಧ್ಯೆ ಸಂತ್ರಸ್ತರು ತಮ್ಮನ್ನು ಕರೆದೊಯ್ಯಲು ಬಂದಿದ್ದ ಬಂಧು-ಹಿತೈಷಿಗಳನ್ನು ಬಿಗಿದಪ್ಪಿ ಕಣ್ಣೀರಾದರು.
‘ಮುಂಬೈನಿಂದ ಮಂಗಳೂರಿಗೆ ಮಂಗಳವಾರ ಬರುತ್ತಿದ್ದ ಬಸ್ ಬೆಳಗ್ಗೆ 9 ಗಂಟೆ ಸುಮಾರು ಶಿರಸಿ ಘಾಟ್‌ನ ಕೊನೆಯ ತಿರುವಿನ ಬಳಿ ವಿಪರೀತ ಮಳೆಯಿಂದಾಗಿ ಮುಂದಡಿ ಇಡದಂತೆ ಸ್ತಬ್ಧಗೊಂಡಿತು. ಕುಮಟಾದಿಂದ ಕೇವಲ 10 ಕಿ.ಮೀ. ದೂರದಲ್ಲಿ ಸಿಕ್ಕಿಹಾಕಿಕೊಂಡಿದ್ದೇವು. ಹಗಲಿಡೀ ಹಸಿವಿನಿಂದ ಬಳಲಿದೆವು. ಸಂಜೆ ಸ್ನೇಹಿತನೋರ್ವ ತಂದ ಆಹಾರದಿಂದ ಹಸಿವು ನೀಗಿಸಿಕೊಂಡೆವು. ಅಲ್ಲಿಂದ ರಾತ್ರಿ 9:30ರ ಸುಮಾರು ಬಸ್ ತೆರಳಲು ಮಾರ್ಗ ಅನುಕೂಲಕರವಾಯಿತು. ಅಲ್ಲಿಂದ ಹೊರಟು ಮಂಗಳೂರು ತಲುಪಿದ ತಕ್ಷಣ ದೊಡ್ಡ ಗಂಡಾತರದಿಂದ ಬಿಡುಗಡೆ ಪಡೆದಂತಾಯಿತು’ ಎಂದು ಕುವೈತ್‌ನಲ್ಲಿ ಸಂಕಷ್ಟಕ್ಕೀಡಾದ ಸಂತ್ರಸ್ತ ಅಝೀಝ್ ಅಬ್ದುಲ್ ಬೋಳಾಯಿ ನಿಟ್ಟುಸಿರು ಬಿಟ್ಟರು.
‘ಮಾರ್ಗ ಮಧ್ಯದಲ್ಲೇ ಸಿಲುಕಿದ್ದ ಸಂತ್ರಸ್ತರನ್ನು ಬಚಾವು ಮಾಡಲು ಖಾಸಗಿ ಬಸ್‌ನವರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. ಘಾಟ್ ಪ್ರದೇಶವು ಜನಸಂಪರ್ಕವಿಲ್ಲದ ಸ್ಥಳ. ಪ್ರಕೃತಿಯ ರೌದ್ರತೆ ಮಧ್ಯೆ ವಿಲವಿಲನೆ ಒದ್ದಾಡುತ್ತಿದ್ದ ಸಂತ್ರಸ್ತರ ಕಷ್ಟವನ್ನು ಪ್ರಕೃತಿಯೇ ಅರಿತುಕೊಂಡು ಮಳೆನೀರು ನಿಯಂತ್ರಣಕ್ಕೆ ಬಂತು. ಇದರಿಂದ ಬಸ್ ತೆರಳಲು ಅನುಕೂಲವಾಯಿತು’ ಎನ್ನುತ್ತಾರೆ ಅಝೀಝ್ ಅಬ್ದುಲ್ ಬೋಳಾಯಿ ಅವರು.
ಶಾಸಕರಿಗೆ ಮನವಿ: ‘ಕುವೈತ್‌ಗೆ ಉದ್ಯೋಗಕ್ಕೆಂದು ತೆರಳಿ ನರಕಯಾತನೆ ಅನುಭವಿಸಿದೆವು. ಉದ್ಯೋಗ ನೀಡುವುದಾಗಿ ಕರೆದೊಯ್ದಿದ್ದ ಏಜೆನ್ಸಿಯು ನಮಗೆ ಅನ್ಯಾಯ ಮಾಡಿದೆ. ಏಜೆನ್ಸಿಗೆ ಪ್ರತಿ ಸಂತ್ರಸ್ತರು ಸುಮಾರು 60 ಸಾವಿರ ರೂ. ಕೊಟ್ಟಿದ್ದೇವೆ. ಈ ಪೈಕಿ ಹಲವರು ಸಾಲ ಮಾಡಿ ಹಣ ಪಾವತಿಸಿದ್ದರು. ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಕೂಡ ದುಡಿಮೆಯಾಗಿಲ್ಲ. ನಾವು ಪಾವತಿಸಿದ ಹಣವನ್ನು ಏಜೆನ್ಸಿಯಿಂದ ವಾಪಸ್ ಕೊಡಿಸಲು ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಮನವಿ ಮಾಡುತ್ತೇವೆ’ ಎಂದು ಸಂತ್ರಸ್ತ ಅಝೀಝ್ ಅಬ್ದುಲ್ ಬೋಳಾಯಿ ಒತ್ತಾಯಿಸಿದ್ದಾರೆ.