×
Ad

ಭಟ್ಕಳ ಆಧಾರ ಕಾರ್ಡ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಂಝೀಮ್ ವತಿಯಿಂದ ಶಾಸಕರಿಗೆ ಮನವಿ

Update: 2019-08-07 21:38 IST

ಭಟ್ಕಳ: ಸುಮಾರು 50ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಭಟ್ಕಳ ನಗರದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು ಇದಕ್ಕೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದ್ದು ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಕೂಡಲೇ ಇಲ್ಲಿನ ಆಧಾರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನಿಯೋಗ ಶಾಸಕ ಸುನಿಲ್ ನಾಯ್ಕರಲ್ಲಿ ಮನವಿ ಮಾಡಿಕೊಂಡಿದೆ.

ಮಂಗಳವಾರ ಶಾಸಕರ ಕಚೇರಿಗೆ ತೆರಳಿದ ತಂಝೀಮ್ ನಿಯೋಗವು, ಭಟ್ಕಳದಲ್ಲಿ ಕೇವಲ ಎರಡು ಕಡೆಗಳಲ್ಲಿ ಮಾತ್ರ ಆಧಾರ್ ಸಂಬಂಧಿಸಿ ಸಮಸ್ಯೆಗಳನ್ನು ಬಗೆ ಹರಿಸಲಾಗುತ್ತಿದ್ದು ನಗರ ಹಾಗೂ ಗ್ರಾಮೀಣ ಭಾಗದ ನೂರಾರು ಮಂದಿ ನಿತ್ಯವೂ ಈ ಕೇಂದ್ರಗಳ ಮುಂದೆ ಮುಂಜಾನೆ ಮೂರು ಗಂಟೆಯಿಂದ ಸಂಜೆಯವರೆಗೆ ಸರತಿಯಲ್ಲಿ ನಿಲ್ಲಬೇಕಾದ ಸಂದರ್ಭ ಉಂಟಾಗಿದ್ದು ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆಧಾರ್ ಕಾರ್ಡ್ ನಲ್ಲಿ ವಿಳಾಸ, ಹೆಸರು, ಬದಲಾವಣೆ, ಸೇರ್ಪಡೆ ಮತ್ತಿತರ ಸಮಸ್ಯೆಗಳೊಂದಿಗೆ ದಿನಾಲೂ ಜನರು ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ತಾಲೂಕು ಪಂಚಾಯತ್, ಗ್ರಾಮಪಂಚಾಯತ್ ಪುರಸಭೆಗಳಲ್ಲಿ ಆಧಾರ ಸಂಬಂಧಿಸಿಗಳಿಗೆ ಕೂಡಲೇ ಪರಿಹಾರ ಸಿಗುತ್ತಿತ್ತು ಈಗ ಕೇವಲ ಜನಸ್ನೇಹಿ ಹಾಗೂ ಪೋಸ್ಟ್ ಆಪೀಸ್ ನಲ್ಲಿ ಮಾತ್ರ ಈ ಕೇಂದ್ರಗಳು ಇರುವುದರಿಂದಾಗಿ ಮತ್ತು ಹೆಸರು ಹಾಗೂ ವಿಳಾಸ ಬದಲಾವಣೆಗೆ ಪತ್ರಾಂಕಿತ ಅಧಿಕಾರಿಗಳ ಮೇಲು ರುಜು ಕಡ್ಡಾಯವಾಗಿದ್ದು ಸಾರ್ವಜನಿಕರು ಪತ್ರಾಂಕಿತ ಅಧಿಕಾರಿಗಳ ಮಾಹಿತಿ ಇಲ್ಲದೆ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದು ಸುಸ್ತಾಗುತ್ತಿದ್ದಾರೆ. ಅಲ್ಲದೆ ಯಾವ ಅಧಿಕಾರಿಗಳೂ ಕೂಡ ಹೆಸರು ಹಾಗೂ ವಿಳಾಸ ಬದಲಾವಣೆಗೆ ಮೇಲು ರುಜು ಹಾಕಲು ಒಪ್ಪುತ್ತಿಲ್ಲವಾದ್ದರಿಂದ ಯಾರ ಬಳಿ ಮೇಲು ರುಜು ಮಾಡಿಕೊಳ್ಳಬೇಕೆನ್ನುವ ಗೊಂದಲಲ್ಲೇ ಸಾರ್ವಜನಿಕರು ಇರಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದು ಕೂಡಲೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಶಾಸಕರು ಕಾರ್ಯ ಪ್ರವೃತ್ತರಾಗಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ.

ನಿಯೋಗದ ಮನವಿಗೆ ಶಾಸಕರ ಸ್ಪಂಧನೆ: ತಂಝೀಮ್ ನಿಯೋಗದ ಮನವಿಗೆ ಕೂಡಲೇ ಸ್ಪಂಧಿಸಿದ ಶಾಸಕ ಸುನಿಲ್ ನಾಯ್ಕ ಕೂಡಲೇ ಜಿಲ್ಲಾಧಿಕಾರಿ ಕೆ.ಹರಿಶಕುಮಾರ್ ಹಾಗೂ  ಭಟ್ಕಳ ತಹಸಿಲ್ದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ಅವರು ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯ್ ಪರ್ವೇಝ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಕಾರ್ಯದರ್ಶಿ ಜೈಲಾನಿ ಶಾಬಂದ್ರಿ, ಸದಸ್ಯರಾದ ಬುರ್ಹಾನ್ ಕೆ.ಎಂ, ಸೈಯ್ಯದ್ ಇಮ್ರಾನ್ ಲಂಕಾ, ಭಟ್ಕಳ ಮುಸ್ಲಿಮ ಯುತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್, ಅಶ್ಫಾಖ್ ಕೆ.ಎಂ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News