ಎರಡು ಬಾರಿ ಉಡುಪಿ ಜಿಲ್ಲೆಗೆ ಬಂದಿದ್ದ ಸುಷ್ಮಾ ಸ್ವರಾಜ್
ಉಡುಪಿ, ಆ.7: ಮಂಗಳವಾರ ರಾತ್ರಿ ಹೊಸದಿಲ್ಲಿಯಲ್ಲಿ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 1999 ಹಾಗೂ 2009 ರಲ್ಲಿ ಎರಡು ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ್ದರು.
1999ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣಕ್ಕಾಗಿ ಅವರು ಉಡುಪಿ ಹಾಗೂ ಕುಂದಾಪುರಗಳಿಗೆ ಭೇಟಿ ನೀಡಿದ್ದರು. 2009ರ ಸೆ.11ರಂದು ಅವರು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯ ಸಂದರ್ಭದಲ್ಲಿ ಅವರ ವಿಶೇಷ ಅಹ್ವಾನದ ಮೇರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಅಂದು ಮಠದ ವತಿಯಿಂದ ಸನ್ಮಾನಿಸಲಾಗಿತ್ತು. ಅವರೊಂದಿಗೆ ದಿ.ಅನಂತಕುಮಾರ್ ಸಹ ಆಗಮಿಸಿದ್ದರು.
ಪೇಜಾವರಶ್ರೀ ಸಂತಾಪ: ಸುಷ್ಮಾ ಸ್ವರಾಜ್‌ರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ರಾಷ್ಟ್ರ ಸೇವೆ ಅಮೋಘವಾದದ್ದು.ವಿದೇಶ ಸಚಿವೆ ಯಾಗಿ ಉತ್ತಮ ಕಾರ್ಯ ಮಾಡಿದ್ದರು. ನಮ್ಮ ಜೊತೆ ಹಲವು ವರ್ಷಗಳಿಂದ ಸಂಪರ್ಕ ದಲ್ಲಿದ್ದರು. ಅವರ ನಿಧನದಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟ. ಕಾಶ್ಮೀರ ಗೊಂದಲ ಪರಿಹಾರ ಅವರ ಕೊನೆ ಆಸೆಯಾಗಿತ್ತು. ಅವರ ಟ್ವೀಟ್ನಿಂದ ರಾಷ್ಟ್ರಾಭಿಮಾನ ಬಹಿರಂಗವಾಗಿದೆ. ಅವರ ಚೇತನಕ್ಕೆ ಭಗವಂತನ ಅನುಗ್ರಹವಾಗಲಿ ಎಂದು ಮೈಸೂರಿನಲ್ಲಿ ಚಾತುರ್ಮಾಸ್ಯ ವೃತದಲ್ಲಿರುವ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಪಲಿಮಾರುಶ್ರೀ: ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ತನ್ನ ಸಣ್ಣ ವಯಸ್ಸಿನಿಂದಲೆ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಬಂದು, ದೇಶ ಸೇವೆಗಾಗಿ ತನ್ನನ್ನು ಮುಡುಪಾಗಿಸಿಕೊಂಡಿದ್ದ, ವಿವಿಧ ಹುದ್ದೆಗಳನ್ನು ಅಲಂಕರಿಸಿ ವಿದೇಶಾಂಗ ಸಚಿವೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಧೀಮಂತ ನಾಯಕಿಯ ನಿಧನ ನಮಗೆ ದುಃಖ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಸಹ ಸುಷ್ಮಾ ಸ್ವರಾಜ್ ನಿಧನಕ್ಕೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅಲ್ಲದೇ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಇಂದು ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶೃದ್ದಾಂಜಲಿ ಸಭೆ ನಡೆಯಿತು.