×
Ad

ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡಿ: ಹೆಪ್ಸಿಬಾ ರಾಣಿ

Update: 2019-08-07 22:07 IST

ಉಡುಪಿ, ಆ.7: ಮಕ್ಕಳಲ್ಲಿ ಅತಿಸಾರ ಬೇಧಿ ಉಂಟು ಮಾಡುವ ರೋಟಾ ವೈರಸ್ ನಿಯಂತ್ರಣಕ್ಕಾಗಿ, ಮಕ್ಕಳಿಗೆ 6ನೇ, 10ನೇ ಮತ್ತು 14ನೇ ವಾರದಲ್ಲಿ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ರೋಟಾ ವೈರಸ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ, ರೋಟಾ ವೈರಸ್‌ನಿಂದ ಮಕ್ಕಳಲ್ಲಿ ಕಂಡು ಬರುವ ಅತಿಸಾರ ಬೇಧಿ ನಿಯಂತ್ರಿಸಲು ರೋಟಾ ವೈರಸ್ ಲಸಿಕೆ ಯನ್ನು ನೀಡಬೇಕಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಲಸಿಕೆ ಸೇರ್ಪಡೆಯಾಗಿದೆ. ಈ ವೈರಸ್‌ನಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಹಾಗೂ ಲಸಿಕೆ ನೀಡುವುದರ ಕುರಿತು ಆರೋಗ್ಯ ಇಲಾಖೆಯು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡು ವಂತೆ ಡಿಎಚ್ಒ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಗರ್ಭಿಣಿ ಮಹಿಳೆ ಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳು ಈ ಲಸಿಕೆಯಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸುವಂತೆ ಹೆಪ್ಸಿಬಾ ರಾಣಿ ಸೂಚಿಸಿದರು.

ರಾಜ್ಯಾದ್ಯಂತ ಆ.3ನೇ ವಾರದಲ್ಲಿ ರೋಟಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದ್ದು, ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ರೋಟಾ ಲಸಿಕೆಯ ಪ್ರಾಮುಖ್ಯತೆ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ, ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸುವಂತೆ ಮತ್ತು ಸಮುದಾಯ ಸಬೆಗಳನ್ನು ನಡೆಸಿ ಮಾಹಿತಿ ನೀಡಬೇಕು, ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ಲಸಿಕೆ ಯಿಂದ ವಂಚಿತರಾಗದಂತೆ ಅಗತ್ಯಕ್ರಮ ಕೈಗೊಳ್ಳುವಂತೆ ಡಿಸಿ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ, ರೋಟಾ ಲಸಿಕೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಎಂ.ಜಿ. ರಾಮ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News