×
Ad

“ಅವರು ನನ್ನ ತಾಯಿಯಂತಿದ್ದರು”

Update: 2019-08-07 22:07 IST

ಮುಂಬೈ, ಆ.7: ಸುಶ್ಮಾ ಸ್ವರಾಜ್ ಅವರ ನಿಧನದ ವಾರ್ತೆ ಮುಂಬೈನ ಇಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿ ಅವರ ಪಾಲಿಗೆ ಬರಸಿಡಿಲಿನಂತೆ ಎರಗಿದೆ. ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಆರು ವರ್ಷಗಳಿಂದ ಕೊಳೆಯುತ್ತಿದ್ದ ಅನ್ಸಾರಿ ಸ್ವರಾಜ್ ಅವರ ಪ್ರಯತ್ನಗಳಿಂದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಂಧಮುಕ್ತಗೊಂಡು ಸ್ವದೇಶಕ್ಕೆ ಮರಳುವಂತಾಗಿತ್ತು.

‘ನನಗೆ ಸ್ವರಾಜ್ ಬಗ್ಗೆ ತುಂಬ ಗೌರವವಿದೆ. ಅವರು ಸದಾ ನನ್ನ ಹೃದಯದಲ್ಲಿ ಜೀವಂತವಾಗಿರುತ್ತಾರೆ. ಅವರು ನನಗೆ ತಾಯಿಯಂತಿದ್ದರು. ನಾನು ಪಾಕಿಸ್ತಾನದಿಂದ ಮರಳಿದ ಬಳಿಕ ಬದುಕಿನಲ್ಲಿ ಮುನ್ನಡೆಯಲು ಅವರೇ ನನಗೆ ಮಾರ್ಗದರ್ಶನ ನೀಡಿದ್ದರು. ಅವರ ನಿಧನ ನನಗೆ ಭಾರೀ ನಷ್ಟವನ್ನುಂಟು ಮಾಡಿದೆ ’ಎಂದು ಅನ್ಸಾರಿ ಸುದ್ದಿಸಂಸ್ಥೆಗೆ ತಿಳಿಸಿದರು.

 ಸ್ವರಾಜ್ ಜನರ ಸಂಪರ್ಕಕ್ಕೆ ಸುಲಭವಾಗಿ ಲಭ್ಯವಾಗುತ್ತಿದ್ದ ರಾಜಕಾರಣಿಯಾಗಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದಾಗ ನೆರವಿಗಾಗಿ ಟ್ವಿಟರ್ ಮನವಿಗಳಗೆ ತಕ್ಷಣ ಸ್ಪಂದಿಸುತ್ತಿದ್ದ ಅವರು ವಿದೇಶಗಳಲ್ಲಿ ಸಂಕಷ್ಟದಲ್ಲಿದ್ದ ಅದೆಷ್ಟೋ ಭಾರತೀಯರಿಗೆ ನೆರವಾಗಿದ್ದರು. ತಮಾಷೆಯ ಮನವಿಗಳಿಗೂ ಅವರು ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದರು.

ಅನ್ಸಾರಿ 2012ರಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿದ್ದರು. ಭಾರತೀಯ ಗೂಢಚಾರಿ ಎಂಬ ಆರೋಪದಲ್ಲಿ 2015,ಡಿ.15ರಂದು ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆ ವಿಧಿಸಲ್ಪಟ್ಟಾಗಿನಿಂದ ಪೇಶಾವರದ ಜೈಲಿನಲ್ಲಿ ಕೊಳೆಯುತ್ತಿದ್ದರು.

   ಕಳೆದ ಡಿಸೆಂಬರ್‌ನಲ್ಲಿ ವಾಘಾ ಗಡಿಯ ಮೂಲಕ ಸ್ವದೇಶವನ್ನು ಪ್ರವೇಶಿಸಿದ್ದ ಅನ್ಸಾರಿ ತನಗಾಗಿ ಕಾದು ನಿಂತಿದ್ದ ಕುಟುಂಬ ಸದಸ್ಯರೊಂದಿಗೆ ಪುನರ್‌ಮಿಲನಗೊಂಡಾಗ ಅಲ್ಲಿ ಕಣ್ಣೀರ ಕೋಡಿಯೇ ಹರಿದಿತ್ತು. ತನ್ನನ್ನು ಭಾರತಕ್ಕೆ ಮರಳಿಸಲು ನೆರವಾಗಿದ್ದಕ್ಕಾಗಿ ಆತ ಕೃತಜ್ಞತೆ ಸಲ್ಲಿಸಬಯಸಿದ್ದ ಹಲವರಿದ್ದರು. ಆದರೆ ಅನ್ಸಾರಿಯ ಅತ್ಯಂತ ಹೃತ್ಪೂರ್ವಕ ಕೃತಜ್ಞತೆಗಳು ಸ್ವರಾಜ್ ಅವರಿಗಾಗಿ ಮೀಸಲಾಗಿದ್ದವು.

ಅನ್ಸಾರಿ ಮರಳಿದ ಬೆನ್ನಲ್ಲೇ ಅವರನ್ನು ಮತ್ತು ತಾಯಿ ಫೌಝಿಯಾರನ್ನು ತನ್ನ ಕಚೇರಿಯಲ್ಲಿ ಸ್ವರಾಜ್ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದರು.

‘ ಸುಶ್ಮಾಜಿ ನನ್ನನ್ನು ಅಪ್ಪಿಕೊಂಡಾಗ ಪ್ರೀತಿಯಿಂದ ಮಗೂ ಎಂದು ಕರೆದಿದ್ದರು. ನಮಗಾಗಿ ಅವರ ಪ್ರೀತಿಯನ್ನು ನಾನಲ್ಲಿ ಕಾಣುತ್ತಿದ್ದೆ. ನೀವು ದೇಶದ ಯುವಜನರ ಪಾಲಿಗೆ ಭಾರತ ಮಾತೆಗಿಂತ ಕಡಿಮೆಯಲ್ಲ ಎಂದು ನಾನು ಮತ್ತು ನನ್ನ ಸೋದರ ಸುಶ್ಮಾಜಿಯವರಿಗೆ ಹೇಳಿದ್ದೆವು’ ಎಂದು ಅನ್ಸಾರಿ ತಿಳಿಸಿದರು.

‘ಮೇರಿ ಭಾರತ್ ಮಹಾನ್,ಮೇರಿ ಮೇಡಂ ಮಹಾನ್,ಸಬ್ ಮೇಡಮ್‌ನೇ ಹೀ ಕಿಯಾ ಹೈ’ ಎಂದು ಮಗನನ್ನು ಮತ್ತೆ ಪಡೆದಿದ್ದ ಫೌಝಿಯಾ ಕೊಂಡಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News