×
Ad

ಉಡುಪಿ: ಜಿಲ್ಲೆಯಲ್ಲಿ ವಿಶ್ರಾಂತಿ ಪಡೆದ ಮಳೆ; ತಗ್ಗಿದ ನೆರೆ

Update: 2019-08-07 22:31 IST

ಉಡುಪಿ, ಆ.7: ಸತತ ಮಳೆಯಿಂದ ಮಂಗಳವಾರ ಜಿಲ್ಲೆಯಾದ್ಯಂತ ಇದ್ದ ನೆರೆ ಪರಿಸ್ಥಿತಿ, ಮಳೆ ವಿಶ್ರಾಂತಿ ಪಡೆದ ಕಾರಣ ಇಂದು ಇಳಿದಿದ್ದು, ಜಿಲ್ಲೆಯ ಜನಜೀವನ ಬುಧವಾರ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಿದೆ. ನಿನ್ನೆ ತುಂಬಿ ಹರಿಯುತಿದ್ದ ಜಿಲ್ಲೆಯ ನದಿ, ಹಳ್ಳಗಳೆಲ್ಲವೂ ಇಂದು ಎಂದಿನ ಸ್ಥಿತಿಗೆ ಮರಳಿದೆ.

ಅತೀ ಹೆಚ್ಚು ಮನೆಗಳು ಜಲಾವೃತವಾದ ಬೈಂದೂರು ಮತ್ತು ಹೆಬ್ರಿಗಳಲ್ಲಿ ಇಂದು ಸಾಮಾನ್ಯ ಸ್ಥಿತಿ ಇತ್ತು. ಬೈಂದೂರಿನಲ್ಲಿ ಇಂದು ಮಳೆ-ಗಾಳಿಯಿಂದ 10 ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿವೆ. ನೂರಾರು ಮನೆಗಳು ಜಲಾವೃತವಾದ ನಾವುಂದ, ನಾಡಾ, ಬಡಾಕೇರಿಗಳಲ್ಲಿ ನೆರೆ ಸಂಪೂರ್ಣವಾಗಿ ಇಳಿದಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಅವರು ತಿಳಿಸಿದ್ದಾರೆ.

ಪದೇ ಪದೇ ನೆರೆ ಬರುವ ಕಾರಣ ಮಳೆಗಾಲ ಮುಗಿಯುವವರೆಗೆ ಒಂದು ದೋಣಿಯನ್ನು ಖಾಯಂ ಆಗಿ ಇರಿಸುವಂತೆ ನಾಡಾ ಗ್ರಾಪಂ ವ್ಯಾಪ್ತಿಯ ಜನರು ಬೇಡಿಕೆ ಇರಿಸಿದ್ದು, ಇದರಂತೆ ಒಂದು ದೋಣಿಯನ್ನು ನಾಡಾಕ್ಕೆ ನೀಡಲು ನಿರ್ಧರಿಸಲಾಗಿದೆ. ಇದು ಗ್ರಾಪಂನ ನಿರ್ವಹಣೆಯಲ್ಲಿ ಇರಲಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ಹೆಬ್ರಿಯಲ್ಲಿ ಸೀತಾನದಿಯ ನೆರೆ ಇಳಿದಿದೆ. ಇಲ್ಲೂ ನಿನ್ನೆಯ ಗಾಳಿ-ಮಳೆಯಿಂದ ಕೆಲವು ಮನೆಗಳಿಗಾದ ಹಾನಿ ಇಂದು ವರದಿಯಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಇಂದು ಯಾವುದೇ ಮಹತ್ವದ ಹಾನಿ ವರದಿಯಾಗಿಲ್ಲ ಎಂದು ತಾಲೂಕು ಕಚೇರಿ ಮಾಹಿತಿ ನೀಡಿವೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಮತ್ತು ಉಪ್ಪಿಕುದ್ರು ಗ್ರಾಮಗಳಲ್ಲಿ ಒಂದೆರಡು ಮನೆಗಳಿಗೆ ಹಾನಿಯಾಗಿದ್ದನ್ನು ಬಿಟ್ಟರೆ ತಾಲೂಕಿನಲ್ಲಿ ಯಾವುದೇ ವಿಶೇಷ ಹಾನಿ ವರದಿಯಾಗಿಲ್ಲ ಎಂದು ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದರು. ವಾರಾಹಿ ಜಲವಿದ್ಯುತ್ ಯೋಜನೆಯ ಎತ್ತಣಕಟ್ಟೆ ಅಣೆಕಟ್ಟಿನ ಒಂದು ಗೇಟ್‌ನ್ನು ತೆರೆದು ಇದರಿಂದ ನೀರು ಹರಿದು ಬಂದಿದ್ದರೂ, ಕುಂದಾಪುರ ತಾಲೂಕಿನಲ್ಲಿ ಇಂದು ಗಾಳಿ ಮತ್ತು ಮಳೆ ಇಲ್ಲದ ಕಾರಣ ನದಿಯಲ್ಲಿ ಇದರಿಂದ ಯಾವುದೇ ಪರಿಣಾಮ ಕಂಡುಬಂದಿಲ್ಲ ಎಂದು ಅವರು ಹೇಳಿದರು.

ಮಂಗಳವಾರ ಬೀಸಿದ ಬಿರುಗಾಳಿಗೆ ಕಾರ್ಕಳ ತಾಲೂಕಿನ ಹಲವೆಡೆಗಳಲ್ಲಿ ತೋಟದ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಜೀವಂಧರ್ ಕುಮಾರ್ ಅವರ ತೋಟದ 200ಕ್ಕೂ ಅಧಿಕ ಅಡಿಕೆ ಮರಗಳು ಧರಾಶಾಹಿಯಾಗಿದ್ದು, ಇದರಿಂದ ಅಂದಾಜು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾದ ಬಗ್ಗೆ ವರದಿಯಾಗಿದೆ.

ಅದೇ ರೀತಿ ನಲ್ಲೂರು ಗ್ರಾಮದ ಪದ್ಮಪ್ರಸಾದ್ ಅವರಿಗೆ ಸೇರಿದ 100 ಅಡಿಕೆ ಮರ ಹಾಗೂ 20 ರಬ್ಬರ್ ಮರಗಳು ನೆಲಕ್ಕೆ ಉರುಳಿದ್ದು 30,000 ರೂ. ಹಾಗೂ ಮರ್ಣೆಯ ಕಾಶ್ಮಿರ್ ಡಿಸಿಲ್ವ ಅವರು ಮನೆಯ ಅಡಿಕೆ ತೋಟವೂ ಇದರಿಂದ ಹಾನಿಗೊಳಗಾಗಿದ್ದು 35,000ಕ್ಕೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಶಿರ್ಲಾಲುಗ್ರಾಮದ ಜೀವಂಧರ್ ಪೂಜಾರಿ ಇವರ ಅಡಿಕೆ ತೋಟಕ್ಕೆ 20,000, ಸದಾನಂದ ಪೂಜಾರಿ ಇವರ ತೋಟಕ್ಕೆ 30,000ರೂ, ನೂರಾಲ್‌ಬೆಟ್ಟು ಗ್ರಾಮದ ವಿಜಯಕುಮಾರ್ ಜೈನ್ ಇವರ ತೋಟಕ್ಕೆ 40 ಸಾವಿರ ರೂ ಹಾನಿಯಾಗಿದೆ.

ಜಿಲ್ಲೆಯಲ್ಲಿ ಮನೆಗಳಿಗೆ, ಕೊಟ್ಟಿಗೆ ಹಾಗೂ ಇತರ ಕಡೆಗಳಿಗೆ ಗಾಳಿ- ಮಳೆಯಿಂದ ಹಾನಿಯಾದ 100 ಪ್ರಕರಣಗಳು ಜಿಲ್ಲಾ ಪ್ರಾಕೃತಿಕ ವಿಕೋಪ ನಿಯಂತ್ರಣಕ್ಕೆ ವರದಿಯಾಗಿದ್ದು, ಇವುಗಳಲ್ಲಿ ಲಕ್ಷಾಂತರ ರೂ.ವೌಲ್ಯದ ಸೊತ್ತುಗಳು ನಷ್ಟವಾದ ಬಗ್ಗೆ ಮಾಹಿತಿ ಇದೆ. ಇವುಗಳಲ್ಲಿ ಕಾರ್ಕಳದಿಂದ 44, ಕುಂದಾಪುರದಿಂದ 10, ಬ್ರಹ್ಮಾವರದಿಂದ 17, ಬೈಂದೂರಿನಿಂದ 15 ಹಾಗೂ ಕಾಪುವಿನಿಂದ 14 ಪ್ರಕರಣಗಳು ವರದಿಯಾಗಿವೆ.

ಕಾಪು ತಾಲೂಕಿನ ಪಾಂಗಾಳದ ಸಿಎಸ್‌ಐ ಚರ್ಚ್‌ಗೆ ಗಾಳಿಮಳೆಯಿಂದ ಹಾನಿಯಾಗಿದ್ದು 50 ಸಾವಿರ ರೂ.ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News