5ಜಿಗಾಗಿ ವಾವೇ ಜೊತೆ ವ್ಯವಹಾರಕ್ಕಾಗಿ ಚೀನಾದಿಂದ ಭಾರತದ ಬ್ಲ್ಯಾಕ್‌ಮೇಲ್

Update: 2019-08-07 17:02 GMT

ವಾಶಿಂಗ್ಟನ್, ಆ. 7: ತನ್ನ 5ಜಿ ಮೊಬೈಲ್ ಜಾಲಕ್ಕಾಗಿ ವಾವೇ ಕಂಪೆನಿಯೊಂದಿಗೆ ವ್ಯವಹಾರ ಮಾಡಿಕೊಳ್ಳುವಂತೆ ಚೀನಾವು ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಅಮೆರಿಕದ ಪ್ರಭಾವಿ ಸಂಸದ ಜಿಮ್ ಬ್ಯಾಂಕ್ಸ್ ಮಂಗಳವಾರ ಆರೋಪಿಸಿದ್ದಾರೆ.

ಅದೇ ವೇಳೆ, ಭಾರತವು ಅಮೆರಿಕದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ವಿಶ್ವಾಸವನ್ನು ಚೀನಾ ವ್ಯಕ್ತಪಡಿಸಿದೆ.

ಟೆಲಿಕಾಮ್ ಉಪಕರಣಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಹಾಗೂ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾದ ವಾವೇ ಕಂಪೆನಿಯನ್ನು ಭದ್ರತೆಯ ಕಾರಣ ನೀಡಿ ಅಮೆರಿಕ ನಿಷೇಧಿಸಿದೆ ಹಾಗೂ ಚೀನಾದ ಟೆಲಿಕಾಮ್ ಕಂಪೆನಿಯ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸುವಂತೆ ಅದು ಇತರ ದೇಶಗಳ ಮೇಲೆ ಒತ್ತಡ ಹೇರುತ್ತಿದೆ.

ವಾವೇ ಕಂಪೆನಿಯ 5ಜಿ ಮೂಲಸೌಕರ್ಯಗಳನ್ನು ಬಳಸಿಕೊಳ್ಳದಂತೆ ಅಮೆರಿಕದ ಟ್ರಂಪ್ ಆಡಳಿತವು ಭಾರತ ಸೇರಿದಂತೆ ಎಲ್ಲ ಮಿತ್ರದೇಶಗಳನ್ನು ಒತ್ತಾಯಿಸುತ್ತಿದೆ.

‘‘ವಾವೇ ಕಂಪೆನಿಯ 5ಜಿ ಮೂಲಸೌಕರ್ಯಗಳನ್ನು ಬಳಸಿಕೊಳ್ಳುವಂತೆ ಚೀನಾ ಈಗ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಅವರಿಗೆ ಯಾವುದೇ ತಡೆಯಿಲ್ಲ’’ ಎಂದು ಜಿಮ್ ಬ್ಯಾಂಕ್ಸ್ ಹೇಳಿದರು.

 5ಜಿ ಜಾಲವು ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಲಿದೆ. ಮುಂದಿನ ತಲೆಮಾರಿನ ಮೊಬೈಲ್ ಫೋನ್‌ಗಳಿಗೆ ಅದು ಸಂಪರ್ಕಗಳನ್ನು ಕಲ್ಪಿಸುವುದರ ಜೊತೆಗೆ, ಚಾಲಕರಹಿತ ಕಾರುಗಳು ಮುಂತಾದ ನೂತನ ಸಂಶೋಧನೆಗಳಿಗೂ ಅದು ಮಹತ್ವದ್ದಾಗಿದೆ.

‘‘ತಮ್ಮನ್ನು ತಾವು ಕಣ್ಗಾವಲು ಮತ್ತು ಬೇಹುಗಾರಿಕೆಗೆ ಒಡ್ಡಿಕೊಳ್ಳುವಂತೆ ದೇಶಗಳನ್ನು ಚೀನಾವು ಬಲವಂತಪಡಿಸುತ್ತಿದೆ’’ ಎಂದು ಜಿಮ್ ಬ್ಯಾಂಕ್ಸ್ ಆರೋಪಿಸಿದರು.

ಭಾರತದಿಂದ ಸ್ವತಂತ್ರ, ವಸ್ತುನಿಷ್ಠ ನಿರ್ಧಾರ: ಚೀನಾ ವಿಶ್ವಾಸ

ಭಾರತದಲ್ಲಿ 5ಜಿ ಮೊಬೈಲ್ ಜಾಲದ ಪರೀಕ್ಷೆಗಳು ಮತ್ತು ಇತರ ಕಸರತ್ತುಗಳನ್ನು ನಡೆಸಲು ವಾವೇ ಕಂಪೆನಿಗೆ ಅನುಮತಿ ನೀಡುವ ವಿಷಯದಲ್ಲಿ ಭಾರತವು ‘ಸ್ವತಂತ್ರ ಮತ್ತು ವಸ್ತುನಿಷ್ಠ ನಿರ್ಧಾರ’ವೊಂದನ್ನು ತೆಗೆದುಕೊಳ್ಳುವುದು ಎಂಬ ವಿಶ್ವಾಸವನ್ನು ಚೀನಾ ಮಂಗಳವಾರ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News