ಕೇರಳದ ಧರ್ಮ ಫೌಂಡೇಶನ್‌ನಿಂದ ಅಕ್ರಮ ಜಾನುವಾರು ಸಾಗಾಟ ಆರೋಪ: ಮುಖ್ಯಸ್ಥ ಸಹಿತ ನಾಲ್ವರ ಬಂಧನ

Update: 2019-08-07 17:05 GMT

ಕಾಪು, ಆ.7: ಕೇರಳದ ಧರ್ಮ ಫೌಂಡೇಶನ್‌ನಿಂದ ಕುರ್ಕಾಲಿನಲ್ಲಿರುವ ಗೊ ರೀಸರ್ಚ್ ಸೆಂಟರ್‌ಗೆ ಮೂರು ಲಾರಿಗಳಲ್ಲಿ ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಸೆಂಟರ್‌ನ ಮುಖ್ಯಸ್ಥ ಸಹಿತ ನಾಲ್ವರನ್ನು ಕಾಪು ಪೊಲೀಸರು ಇಂದು ಬೆಳಗ್ಗೆ  ಪೊಲಿಪು ಜಂಕ್ಷನ್ ಬಳಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಕ್ಯಾಲಿಕಟ್ ಜಿಲ್ಲೆಯ ತಾಮ್ರಸೇರಿ ಗ್ರಾಮದ ರಶೀದ್(40), ಕ್ವಾಂಡಜೀಲ್ ಗ್ರಾಮದ ಜಮ್‌ಶೀರ್(31), ಅಡಿವರಂ ಗ್ರಾಮದ ಶಮೀರ್ ಎಂ.ಪಿ.(42), ಧರ್ಮ ಫೌಂಡೇಶನ್‌ನ ಗೋ ರೀಸರ್ಚ್ ಸೆಂಟರ್‌ನ ಮುಖ್ಯಸ್ಥ, ಕೇರಳ ವಯನಾಡ್ ಮೇಪಾಡಿಯ ಗಿರೀಶ್(40) ಬಂಧಿತ ಆರೋಪಿಗಳು. ಬಂಧಿತರಿಂದ 28,11,000 ರೂ. ಮೌಲ್ಯದ ಮೂರು ಲಾರಿಗಳು, ಕಾರು ಹಾಗೂ ಅದರಲ್ಲಿದ್ದ 48 ದನಕರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೇರಳ ವಯನಾಡ್‌ನಿಂದ ಧರ್ಮ ಫೌಂಡೇಶನ್ ವತಿಯಿಂದ ಕುರ್ಕಾಲು ಅರಸೀಕಟ್ಟೆ ಎಂಬಲ್ಲಿ ನಡೆಸುತ್ತಿರುವ ಗೋ ರೀಸರ್ಚ್ ಸೆಂಟರ್‌ಗೆ ಈ ದನಕರುಗಳನ್ನು ಸಾಗಾಟದ ಪರವಾನಿಗೆ ಇಲ್ಲದೆ, ಹಿಂಸಾತ್ಮಕ ರೀತಿಯಲ್ಲಿ ಹಾಗೂ ಮಳೆ ನೀರಿಗೆ ಸುರಕ್ಷತೆ ಕ್ರಮ ವಹಿಸದೆ ಅಕ್ರಮವಾಗಿ ಸಾಗಿಸುತ್ತಿದ್ದು, ಇದಕ್ಕೆ ಬೆಂಗಾವಲಾಗಿ ಗಿರೀಶ್ ಹಿಂಬದಿಯಿಂದ ಕಾರಿನಲ್ಲಿ ಬರುತ್ತಿದ್ದರೆನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜಾನುವಾರು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.

ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿದ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಕಾಪು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಕಳ ಉಪವಿಭಾಗದ ಎಎಸ್ಪಿ ಕೃಷ್ಣಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಚಾರಣೆ ವೇಳೆ ಗಿರೀಶ್, ಈ ಜಾನುವಾರುಗಳನ್ನು ಧರ್ಮ ಫೌಂಡೇಶನ್‌ನ ಸ್ಥಾಪಕ ಪಂದಳ ರಾಜಕುಮಾರರ ಮನವಿ ಮೇರೆಗೆ ಅರಸೀಕಟ್ಟೆಯಲ್ಲಿರುವ ಫೌಂಡೇಶನ್‌ನ ರೀಸರ್ಚ್ ಸೆಂಟರ್‌ಗೆ ವಯನಾಡ್‌ನಿಂದ ತರಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News