ಶಿರೂರು ಸ್ವಾಮೀಜಿಯ ಆರಾಧನೆ- ವೃಂದಾವನ ಪ್ರತಿಷ್ಠಾಪನೆ

Update: 2019-08-07 17:06 GMT

ಹಿರಿಯಡ್ಕ, ಆ.7: ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠದ ವತಿಯಿಂದ ಕೀರ್ತಿಶೇಷ ಶಿರೂರು ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯ ಪ್ರಥಮ ವರ್ಷದ ಆರಾಧನೆ ಹಾಗೂ ವೃಂದಾವನ ಪ್ರತಿಷ್ಠಾಪನೆಯು ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಬುಧವಾರ ಧಾರ್ಮಿಕ ವಿಧಿ ವಿಧಾನ ಗಳೊಂದಿಗೆ ಬುಧವಾರ ನಡೆಯಿತು.

ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ವಾಸ್ತು ಹೋಮ, ವಾಸ್ತು ಪೂಜೆ ಜರಗಿತು. ಬುಧವಾರ ಬೆಳಗ್ಗೆ ಋತ್ವಿಜರು ಪುಣ್ಯಾಹವಾಚನ, ಪವಮಾನ ಹೋಮ, ವಿರಜಾಹೋಮ ಪೂರ್ಣಾಹುತಿ ಬಳಿಕ ಪುಣ್ಯಕಲಶಗಳಿಂದ ಶ್ರೀಗಳ ವೃಂದಾವನಕ್ಕೆ ಅಭಿಷೇಕ ನೆರವೇರಿಸಲಾಯಿತು. ನೂತನ ವೃಂದಾವನಕ್ಕೆ ವಿಶೇಷ ಪೂಜೆಯೊಂದಿಗೆ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.

ಶ್ರೀಗಳ ವೃಂದಾವನ: ಶೀರೂರು ಶ್ರೀಗಳ ವೃಂದಾವನವನ್ನು ಮೂಲ ಮಠದ ಆವರಣದಲ್ಲಿ ಸುಮಾರು 32 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿದೆ. ಎಲ್ಲೂರು ವಿಷ್ಣುಮೂರ್ತಿ ಭಟ್ ಉಸ್ತುವಾರಿಯಲ್ಲಿ ಕಾರ್ಕಳದ ಶಿವಕುಮಾರ್ ತಂಡ ಈ ಶಿಲೆಯ ಕೆತ್ತನೆ ಕೆಲಸ ಮಾಡಿದ್ದು, 3.8 ಅಡಿ ಎತ್ತರದ ಶಿಲಾ ವೃಂದಾವನದ ಮಧ್ಯದಲ್ಲಿ ಧ್ಯಾನಸ್ಥ ಯತಿಯ ಬಿಂಬವನ್ನು ಕೆತ್ತಲಾಗಿದೆ.

ಶಿರೂರು ಶ್ರೀಗಳ ಪ್ರಥಮ ವರ್ಷ ಆರಾಧನೆ ಅಂಗವಾಗಿ ಹಿರಿಯಡ್ಕದ ಮೂಲ ಮಠದ ಆವರಣದಲ್ಲಿ ನವಗ್ರಹ ವನ ಹಾಗೂ ಮೂಲಿಕಾವನ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ. ಅದರಂತೆ ವನ ನಿರ್ಮಾಣದ ಕಾರ್ಯ ಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಶ್ರೀಗಳ ಆರಾಧನೆಗೆ ಬಂದಿದ್ದ ಭಕ್ತರಿಗೆ ಔಷಧೀಯ ಗಿಡಗಳನ್ನು ವಿತರಿಸಲಾಯಿತು.

ಉಡುಪಿ ಶ್ರೀಕೃಷ್ಣ ಮಠ ಹಾಗೂ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶಿರೂರು ಶ್ರೀಗಳ ಆರಾಧನೆ ಅಂಗವಾಗಿ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು.

ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಡಾ. ಉದಯ ಕುಮಾರ್ ಸರಳತ್ತಾಯ, ಮಧ್ವೇಶ್ ತಂತ್ರಿ, ಮೂಲ ಮಠದ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ರಾಮದಾಸ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಲಕ್ಷ್ಮೀನಾರಾಯಣ ಭ್, ಪ್ರಕಾಶ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News