ಬಿಜೆಪಿ ಕೋಮುವಾದಿ ಅಜೆಂಡಾ ಮುಂದುವರಿಕೆ: ಬಾಲಕೃಷ್ಣ ಶೆಟ್ಟಿ

Update: 2019-08-07 17:08 GMT

ಉಡುಪಿ, ಆ.7: ಚುನಾಯಿತ ಸರಕಾರವಿಲ್ಲದೆ, ರಾಜ್ಯಪಾಲರ ಆಡಳಿತ ಇರುವ ಸಂದರ್ಭದಲ್ಲಿ ಸೈನ್ಯವನ್ನು ನಿಯೋಜಿಸಿ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿ ಕೇಂದ್ರ ಸರಕಾರ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಟೀಕಿಸಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ರಾಜ್ಯವನ್ನು ವಿಭಜಿಸಿ ಕೇಂದ್ರದ ಆಡಳಿತಕ್ಕೆ ಒಳಪಡಿಸಿದ ಕೇಂದ್ರ ಸರಕಾರದ ಸಂವಿಧಾನ ಮತ್ತು ಪ್ರಜಾ ಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಉಡುಪಿ ಜಿಲ್ಲಾ ಸಿಪಿಎಂ ಹಾಗೂ ಎಡಪಕ್ಷಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕಾಶ್ಮೀರ ಎಂಬುದು ಭಾರತದ ಮುಕುಟ ಮಣಿ. ಕೇಂದ್ರ ಸರಕಾರ ಅಲ್ಲಿರುವ ಸಮಸ್ಯೆಗಳಿಗೆ ಕಾರಣಗಳನ್ನು ಹುಡುಕಿ ಮಾತುಕತೆ ನಡೆಸಬೇಕಾಗಿತ್ತು. ಆದರೆ ಅದನ್ನು ಈಡೇರಿಸಿಲ್ಲ. ವಿಶೇಷ ಸ್ಥಾನಮಾನ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ದೇಶದ ಅನೇಕ ರಾಜ್ಯಗಳಲ್ಲಿ ಇದು ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ತನ್ನ ಕೋಮುವಾದಿ ಅಜೆಂಡಾ ಮುಂದುವರಿಸಲು ಕಾಶ್ಮೀರದ ವಿರುದ್ಧ ಈ ಕ್ರಮ ಕೈೊಂಡಿದೆ ಎಂದು ಅವರು ದೂರಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ್ ಮಾತ ನಾಡಿ, ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಕಿತ್ತುಕೊಂಡಿರುವ ಕೇಂದ್ರ ಸರಕಾರದ ನಡೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಬಿಜೆಪಿ ತನ್ನ ಅಧಿಕಾರ ಕ್ಕಾಗಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದೆ. ಕೇಂದ್ರ ಸರಕಾರ ಬಂಡವಾಳ ಶಾಹಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ದೂರಿದರು.

ಸಿಪಿಎಂ ಮುಖಂಡ ಎಚ್.ನರಸಿಂಹ ಮಾತನಾಡಿ, ಕೇಂದ್ರ ಸರಕಾರ ಮಾಧ್ಯಮದ ಮೂಲಕ ಪದೇ ಪದೇ ಸುಳ್ಳುಗಳನ್ನು ಹೇಳಿ ಅದನ್ನೇ ಸತ್ಯ ಎಂಬು ದಾಗಿ ಬಿಂಬಿಸುತ್ತಿದೆ. ಕೇಂದ್ರದ ಈ ನೀತಿಯ ವಿರುದ್ಧ ಧ್ವನಿ ಎತ್ತಿದರೆ ದೇಶ ದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ದೇಶದ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟಕ್ಕೆ ಕುಸಿದಿದೆ. ಇದನ್ನು ಮರೆ ಮಾಚಲು ಕೇಂದ್ರ ಸರಕಾರ ಕಾಶ್ಮೀರ ವಿಚಾರವನ್ನು ಕೈಗೆತ್ತಿಕೊಂಡಿದೆ. ಕೇಂದ್ರದ ಈ ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ಅರಾಜಕತೆ ಸೃಷ್ಠಿಯಾಗಲಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಕುಂದಾಪುರ ತಾಲೂಕು ಸಮಿತಿ ಸದಸ್ಯ ಅಕ್ಷಯ್ ವಡೆರಹೋಬಳಿ, ಸಿಪಿಎಂ ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ್ ಗೊಲ್ಲ, ಮುಖಂಡರಾದ ಕವಿರಾಜ್, ಉಮೇಶ್ ಕುಂದರ್, ನಳಿನಿ, ಕೆ.ಲಕ್ಷ್ಮಣ್, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News