ಬಂಟ್ವಾಳ: ಕೃತಕ ನೆರೆ, ಮನೆಗಳಿಗೆ ಹಾನಿ, ಗುಡ್ಡ ಜರಿತ
ಬಂಟ್ವಾಳ, ಆ. 7: ಬಂಟ್ವಾಳ ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆ ಮೋಡಕವಿದ ವಾತಾವರಣವಿದ್ದು, ಕಡಿಮೆ ಮಳೆಯಾಗಿದೆ. ಆದರೆ, ಮಂಗಳವಾರ ರಾತ್ರಿ ಗಾಳಿಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಕೃತಕ ನೆರೆ, ಮನೆಗಳಿಗೆ ಹಾನಿ, ಗುಡ್ಡ ಜರಿದು ತೊಂದರೆ, ರಸ್ತೆಯಲ್ಲಿ ನೀರು, ಕೆಸರು ತುಂಬಿ ಸಮಸ್ಯೆಗಳಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಒಟ್ಟು 34 ಹಾನಿ ಪ್ರಕರಣ ಗಳು ಹಾಗೂ ಒಬ್ಬರಿಗೆ ಸಣ್ಣಪ್ರಮಾಣದ ಗಾಯವಾಗಿರುವ ಬಗ್ಗೆ ವರದಿಯಾಗಿವೆ.
ಇವುಗಳಲ್ಲಿ 4 ಮನೆಗಳಿಗೆ ತೀವ್ರ ಹಾನಿ, 18 ಮನೆಗಳು ಭಾಗಶಃ ಹಾನಿ, 1 ತೋಟಗಾರಿಕಾ ಹಾನಿ ಹಾಗೂ 11 ಇತರ ಹಾನಿಗಳಾಗಿರುವ ಬಗ್ಗೆ ವರದಿಯಾಗಿವೆ.
ಎಲ್ಲೆಲ್ಲಿ ಸಮಸ್ಯೆ:
ಬಂಟ್ವಾಳ ತಾಲೂಕಿನ ಸರಪಾಡಿ ಪದ ಎಂಬಲ್ಲಿ ವಾಸದ ಮನೆ ಬರೆ ಜರಿದು ಹಾನಿಯಾಗಿ ಒಬ್ಬರಿಗೆ ಗಾಯವಾಗಿದೆ. ನೆಟ್ಲಮುಡ್ನೂರು ಗ್ರಾಮದ ವಿಮಲ ಎಂಬವರ ಮನೆ, ಬಡಗಬೆಳ್ಳೂರು ಗ್ರಾಮದ ಶೀನ ಬೆಳ್ಚಾಡ ಎಂಬವರ ಮನೆ, ಮಂಚಿ ಪತ್ತುಮುಡಿ ಬಶೀರ್ ಅವರ ಆವರಣಗೋಡೆ, ವಿಟ್ಲ ಕಸಬಾದಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿವೆ. ಬೋಳಂತೂರು ಕೊಕ್ಕೆಪುಣಿ ತಿಮ್ಮಪ್ಪ ರೈ ಮನೆ ಆವರಣಗೋಡೆ, ಸಜಿಪನಡು ಅಂಗನವಾಡಿ ಬಳಿ ಇಬ್ರಾಹಿಂ ಮನೆ ತಡೆಗೋಡೆ ಕುಸಿದಿದ್ದರೆ, ಬಡಗಕಜೆಕಾರು ನೆಬಿಸ ಮನೆ ಹಾನಿಯಾಗಿದೆ.
ಬಡಗಕಜೆಕಾರು ಅವ್ವಮ್ಮ ಮನೆಗೆ ಹಾನಿ, ನೆಟ್ಲಮುಡ್ನೂರು ಲತೀಫ್ ಮನೆ ಗೋಡೆ ಕುಸಿತ, ಬಿಮೂಡ ಗ್ರಾಮದ ಗೂಡಿನಬಳಿ ಸುಲೈಮಾನ್ ಮನೆ ಮೇಲಿನ ಗುಡ್ಡ ಕುಸಿತ, ಮಂಚಿ ಕುಂಟಾರು ಮೋಹನ ಪ್ರಭು ಮನೆ ಆವರಣ ಗೋಡೆ ಕುಸಿತ, ಪಾಂಗಲ್ಪಾಡಿ ವಾಮದಪದವು ಮೂರ್ಜೆ ರಸ್ತೆಗೆ ಮರ ಬಿದ್ದು ಹಾನಿಯಾಗಿರುತ್ತದೆ.
ಬುಡೋಳಿ ನಾಗೇಶ್ ಮನೆಬಳಿ ಅಂಗಡಿಯ ಶೀಟುಗಳು ಗಾಳಿಗೆ ಬಿದ್ದಿದ್ದರೆ, ಚೆನ್ನೈತೋಡಿ ಉಗ್ಗಪ್ಪ ಮನೆಗೆ ಮರ ಬಿದ್ದಿದೆ. ಮಂಚಿ ಉಮಾನಾಥ ಮನೆಯ ಮೇಲ್ಛಾವಣಿ ಹಾರಿಹೋಗಿದ್ದರೆ, ಇಡ್ಕಿದು ಕಂಬಳಬೆಟ್ಟು ನಾಸೀರ್ ಮನೆ ತಡೆಗೋಡೆ ಕುಸಿದಿದೆ.
ಅನಂತಾಡಿ ಗ್ರಾಮದ ಪುಷ್ಪಾವತಿ ಮನೆಗೆ ಹಾನಿಯಾಗಿದೆ, ವಿಟ್ಲ ಕಸಬಾ ಯಶೋಧಾ ಮನೆ ತಡೆಗೋಡೆ ಹಾನಿ, ಕಾವಳ ಮುಡೂರು ಸಿತಾರ ಶೆಟ್ಟಿ ಅವರ 150 ಅಡಕೆ ಮರಗಳು ನೆಲಕ್ಕುರುಳಿವೆ. ಸಜಿಪನಡು ಮೊಯಿದಿನಬ್ಬ ಮನೆ, ಕೆದಿಲ ಗ್ರಾಮದ ಸುಮತಿ ಮನೆ ಬಳಿ ಬರೆ ಜರಿದಿದೆ. ಪಂಜಿಕಲ್ಲು ಕೃಷ್ಣಪ್ಪ ಸಾಲ್ಯಾನ್ ಕೋಳಿ ಫಾರಂ ಸಂಪೂರ್ಣ ಹಾನಿಯಾಗಿರುವ ಬಗ್ಗೆ ಬಂಟ್ವಾಳ ತಾಲೂಕು ಕಚೇರಿಯ ವರದಿ ತಿಳಿಸಿದೆ.
ಕೃತಕ ನೆರೆಯಿಂದಾಗಿ ನೇತ್ರಾವತಿ ನದಿ ತೀರ ಪ್ರದೇಶದ ಕೆಲ ನಿವಾಸಿಗಳನ್ನು ಹಾಗೂ ಪಾಣೆಮಂಗಳೂರು ಮಿಲಿಟರಿ ಗ್ರೌಂಡ್ ಸಮೀಪದ 18 ಮನೆಗಳಲ್ಲಿರುವವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ತುಂಬಿ ಹರಿಯುತ್ತಿರುವ ನೇತ್ರಾವತಿ
ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಇಳಿಮುಖವಾದರೂ ಕುಮಾರಧಾರಾ ನದೀ ಪಾತ್ರಗಳಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಇದರಿಂದ ಜೀವನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದ ಬುಧವಾರವೂ ತುಂಬೆ ವೆಂಟೆಡ್ ಡ್ಯಾಂ ಹಾಗೂ ಶಂಭೂರು ಎಎಂಆರ್ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಯಿತು.
ನೇತ್ರಾವತಿ ನೀರಿನ ಮಟ್ಟದಲ್ಲಿ ಆಗಾಗ್ಗೆ ಏರಿಳಿತ ಕಂಡುಬಂತು. ನದಿ ನೀರಿನ ಮಟ್ಟ ಬೆಳಗ್ಗೆ 8.4 ಇದ್ದರೆ, ಮಧ್ಯಾಹ್ನ 1 ಗಂಟೆಗೆ 8.2 ಇತ್ತು. ಅಪಾಯದ ಮಟ್ಟ 8.5 ಆಗಿದ್ದು, ಸಂಜೆ ವೇಳೆ ಅದು 7.8 ತಲುಪಿತ್ತು. ಶಂಭೂರು ಎಎಂಆರ್ ಡ್ಯಾಂನಲ್ಲಿ 29 ಮೀಟರ್ ಎತ್ತರದಲ್ಲಿ ನೀರು ಸಂಗ್ರಹವಾಗಿದ್ದು, 8 ಗೇಟುಗಳ ಮೂಲಕ ನೀರನ್ನು ಹೊರಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಂಬೆಯಲ್ಲಿ 6.5 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ. ಬಂಟ್ವಾಳದ ಎರಡು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈವರೆಗೆ ಯಾರನ್ನೂ ಅಲ್ಲಿಗೆ ಸ್ಥಳಾಂತರಿಸಿಲ್ಲ.