ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಫಾಲೋವರ್ ಗಳಿದ್ದ ಸುಷ್ಮಾ ಎಷ್ಟು ಮಂದಿಯನ್ನು ಫಾಲೋ ಮಾಡುತ್ತಿದ್ದರು ಗೊತ್ತೇ ?

Update: 2019-08-08 07:11 GMT

ಹೊಸದಿಲ್ಲಿ, ಆ.8: ವಿದೇಶಗಳಲ್ಲಿ ಕಷ್ಟಕ್ಕೆ ಸಿಲುಕಿದ್ದ ಹಲವು ಭಾರತೀಯರ ಪಾಲಿಗೆ ಆಪತ್ಬಾಂಧವರಾಗಿದ್ದ ಹಾಗೂ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಸುಷ್ಮಾ ಸ್ವರಾಜ್ ಇನ್ನು ನೆನಪು ಮಾತ್ರ.

ಟ್ವಿಟರ್ ನಲ್ಲಿ ಬಹಳಷ್ಟು ಸಕ್ರಿಯರಾಗಿದ್ದ  ಸುಷ್ಮಾ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ. ಅದೇನೆಂದರೆ ಅವರಿಗೆ ಟ್ವಿಟರ್ ನಲ್ಲಿ  ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ  1.3 ಕೋಟಿಗೂ ಅಧಿಕ ಫಾಲೋವರ್ಸ್ ಇದ್ದರೂ, ಅವರು ಮಾತ್ರ  ಮೋದಿ ಅಥವಾ ಅಮಿತ್ ಶಾ ಅವರನ್ನು ಟ್ವಿಟರ್ ನಲ್ಲಿ ಫಾಲೋ ಮಾಡಿಲ್ಲ. ಇವರನ್ನು ಮಾತ್ರವಲ್ಲ ಅವರು ಯಾರೊಬ್ಬರನ್ನೂ ಫಾಲೋ ಮಾಡಿಲ್ಲ.

ಟ್ವಿಟರ್ ಮೂಲಕ ತಮ್ಮಿಂದ ಸಹಾಯ ಯಾಚಿಸಿದ್ದ  ಸಂಕಷ್ಟಕ್ಕೀಡಾದ ಹಲವು ಭಾರತೀಯರಿಗೆ ಸಹಾಯ ಮಾಡಿದ್ದ  ಸುಷ್ಮಾ ಅವರ ವಿಶಿಷ್ಟ ಕಾರ್ಯಶೈಲಿಯಿಂದ ಪ್ರೇರಿತರಾಗಿ ಅವರನ್ನು ಅನುಸರಿಸಲು ಈಗಿನ ವಿದೇಶಾಂಗ ಸಚಿವ ಎಸ್ ಜೈಶಂಕರ್  ಕೂಡ ಯತ್ನಿಸುತ್ತಿದ್ದಾರೆ.  ಇರಾಕ್ ನಲ್ಲಿ ಸಿಲುಕಿದ್ದ  ಭಾರತೀಯ ನರ್ಸ್ ಗಳ ಸುರಕ್ಷಿತ ವಾಪಸಾತಿಯಿಂದ ಹಿಡಿದು, ವೀಸಾ, ವಿದೇಶ ಪ್ರವಾಸ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಿದ್ದ ಜನರಿಗೆ  ಯಾವುದೇ ಬೇಧವಿಲ್ಲದೆ ಸಹಾಯ ಮಾಡಿದ್ದವರಾಗಿದ್ದರು ಸುಷ್ಮಾ.

ಪಾಕಿಸ್ತಾನ ಜೈಲಿನಲ್ಲಿ ಆರು ವರ್ಷ ಇದ್ದ  ಹಮೀದ್ ಅನ್ಸಾರಿಯ  ಬಿಡುಗಡೆ, ಯೆಮನ್ ನಿಂದ ಭಾರತೀಯ ನಾಗರಿಕರ ರಕ್ಷಣೆ ಹಾಗೂ ಯುದ್ಧ ಪೀಡಿತ ಇರಾಕ್ ನಲ್ಲಿ ಸಿಲುಕಿದ್ದ 140 ಭಾರತೀಯರ ರಕ್ಷಣೆ ಅವರು ಸಚಿವರಾಗಿದ್ದ ಸಮಯದ ಕೆಲ ಮಹತ್ವದ ಬೆಳವಣಿಗೆಗಳಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News