ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ 63 ಕೋಟಿ ರೂ. ನಷ್ಟ, ಮೂರು ಮಂದಿ ಮೃತ್ಯು : ಸಂಸದೆ ಶೋಭಾ
ಉಡುಪಿ, ಆ.9: ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಸುಮಾರು 63 ಕೋಟಿ ರೂ. ನಷ್ಟ ಉಂಟಾಗಿರುವ ಬಗ್ಗೆ ಮೌಲ್ಯ ಮಾಪನ ಮಾಡಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲ ಇಲಾಖೆಗಳ ತಂಡ ಆಯಾ ಇಲಾಖೆಗೆ ಸಂಬಂಧಿಸಿ ಆಗಿರುವ ಹಾನಿಯ ಕುರಿತು ಮೌಲ್ಯಮಾಪನ ಮಾಡಿ ಪೂರ್ಣ ಪ್ರಮಾಣದ ವರದಿಯನ್ನು ನೀಡಲಿವೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಮಳೆಯಿಂದಾಗಿ ಜಿಲ್ಲೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಈವರೆಗೆ 568 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 2516 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಅದರಲ್ಲಿ 2116 ಕಂಬಗಳನ್ನು ಪುನರ್ ಸ್ಥಾಪಿಸಲಾಗಿದೆ. ಅದೇ ರೀತಿ ಹಾನಿ ಯಾಗಿರುವ 322 ಟ್ರಾನ್ಸ್‌ಫಾರ್ಮರ್‌ಗಳಲ್ಲಿ 318ನ್ನು ಸರಿಪಡಿಸಲಾಗಿದೆ. ಹೀಗೆ ಮೆಸ್ಕಾಂ ಸಿಬ್ಬಂದಿಗಳು ದಿನದ 24ಗಂಟೆಗಳ ಕಾಲವೂ ಅಲರ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ತುರ್ತು ಕಾಮಗಾರಿಗಾಗಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿಧಿಯ ಖಾತೆ ಯಲ್ಲಿ ಈಗಾಗಲೇ 28.35ಕೋಟಿ ರೂ. ಹಣ ಇದ್ದು, ಮುಖ್ಯಮಂತ್ರಿ ಮಾಡಿ ರುವ ಘೋಷಣೆಯಂತೆ ಮತ್ತೆ ಹೆಚ್ಚುವರಿಯಾಗಿ ಐದು ಕೋಟಿ ರೂ. ಹಣ ಈ ಖಾತೆಗೆ ಬರಲಿದೆ ಎಂದು ಅವರು ಹೇಳಿದರು.
ಸಂತ್ರಸ್ತರಿಗೆ ಆಹಾರದ ಕಿಟ್
ಬೈಂದೂರು ತಾಲೂಕಿನ ನಾಡ ಗ್ರಾಮದಲ್ಲಿ ಸುಮಾರು 278 ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ಕುಟುಂಬಗಳನ್ನು ತಕ್ಷಣಕ್ಕೆ ಎತ್ತರ ಪ್ರದೇಶ ದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ ಸಾಮಾನು ಸೇರಿದಂತೆ ಆಹಾರದ ಕಿಟ್ ಪೂರೈಕೆ ಮಾಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಕಾರಣ ಆಯಾ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಅದೇ ರೀತಿ ನನ್ನ ಮತ್ತು ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ತಂಡವನ್ನು ಕೂಡ ಮುಖ್ಯಮಂತ್ರಿ ಗಳು ರಚಿಸಿದ್ದಾರೆ. ಈ ತಂಡ ಜಿಲ್ಲೆಯಾದ್ಯಂತ ಸಂಚರಿಸಿ ಮಳೆಯಿಂದಾಗಿರುವ ಹಾನಿ ಹಾಗೂ ಅದಕ್ಕೆ ತಕ್ಷಣದ ಪರಿಹಾರದ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ 95ಸಾವಿರ ರೂ. ಪರಿಹಾರ ನೀಡಲು ಅವಕಾಶ ಇದ್ದು, ಹೆಚ್ಚುವರಿಯಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಅದೇ ರೀತಿ ಹಾನಿಯಾದ ಮನೆಯವರಿಗೆ ಬಸವ ವಸತಿ ಯೋಜನೆಯಡಿ ಹೊಸ ಮನೆ ಮಂಜೂರು ಮಾಡಲು ಅವಕಾಶ ಕೂಡ ಇದೆ. ಬೆಳೆಹಾನಿ ಬಗ್ಗೆ ಮೌಲ್ಯಮಾಪನ ಮಾಡಿ ಪೂರ್ಣ ಪ್ರಮಾಣದ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ಸುಕುಮಾರ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಸಿಇಒ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಸ್ಪಿ ನಿಶಾ ಜೇಮ್ಸ್, ಜಿಪಂ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.
ಮಳೆಯಿಂದಾಗಿ ಮೃತಪಟ್ಟ ಕುಂದಾಪುರದ ಅಮಿತಾ ಹಾಗೂ ಚೇರ್ಕಾಡಿ ಯ ಗಂಗಾ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂ. ಪರಿಹಾರದ ಚೆಕ್‌ನ್ನು ವಿತರಿಸಲಾಗಿದ್ದು, ಬೈಂದೂರಿನ ಸುಬ್ಬ ಅವರ ವರದಿಯ ನಿರೀಕ್ಷೆಯಲ್ಲಿದ್ದೇವೆ. ಮಳೆಯಿಂದಾಗಿ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ಮೊತ್ತ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದು, ಅದರಂತೆ ಈ ಮೂರು ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ ಒಂದು ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.