×
Ad

ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ವಿರೋಧಿಸಿ ಕಟ್ಟಡ ಕಾರ್ಮಿಕರಿಂದ ಧರಣಿ

Update: 2019-08-09 18:53 IST

ಉಡುಪಿ, ಆ.9: ರಾಜ್ಯ ಕಲ್ಯಾಣ ಮಂಡಳಿಗಳನ್ನು ರದ್ದುಗೊಳಿಸಲಿರುವ ಕೇಂದ್ರ ಸರಕಾರ, ಅದರ ಬದಲು ಕೇಂದ್ರ ಕಲ್ಯಾಣ ಮಂಡಳಿಯನ್ನು ರಚಿಸಿ ರಾಜ್ಯದ ಮಂಡಳಿಗಳಲ್ಲಿರುವ ಕೋಟ್ಯಂತರ ರೂ. ನಿಧಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಇದರಿಂದ ಕಲ್ಯಾಣ ಮಂಡಳಿಯ ನಿಧಿ ಕಾರ್ಮಿಕರಿಗೆ ಸಿಗದೆ ತಪ್ಪಿ ಹೋಗುವ ಅಪಾಯ ಇದೆ ಎಂದು ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಥ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆಯನ್ನು ಕೈಬಿಡಲು ಆಗ್ರಹಿಸಿ, ಕಟ್ಟಡ ಕಾರ್ಮಿಕ ಕಾನೂನು -1996 ಹಾಗೂ ಸೆಸ್ ಕಾನೂನು ಮತ್ತು ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರು ನಡೆಸಿದ ಧರಣಿ ಸತ್ಯಾಗ್ರಹ ವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.

ಈ ಮಂಡಳಿಗಳಿಗೆ ಹಣ ಪಾವತಿ ಮಾಡುವವರು ಕಟ್ಟಡ ನಿರ್ಮಿಸುವವರು ಮತ್ತು ಸಂಘಗಳೇ ಹೊರತು ಸರಕಾರ ಅಲ್ಲ. ಈ ಮಂಡಳಿಗಳಿಗೆ ಸರಕಾರಗಳು ನಯಾ ಪೈಸೆ ನೀಡುವುದಿಲ್ಲ. ಮುಂದೆ ಕೇಂದ್ರ ಸರಕಾರ ಈ ಮಂಡಳಿಯ ಹಣವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಆದುದರಿಂದ ರಾಜ್ಯಮಟ್ಟದ ಕಲ್ಯಾಣ ಮಂಡಳಿಯ ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರಕಾರ ಸಾಮಾಜಿಕ ಸುರಕ್ಷತಾ ಮಸೂದೆ 2018ರನ್ನು ಜಾರಿಗೊಳಿ ಸುವ ಮೂಲಕ ನಾಲ್ಕು ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಈಗ ಪಡೆ ಯುತ್ತಿರುವ ಮದುವೆ, ಪಿಂಚಣಿ, ಹೆರಿಗೆ, ಭತ್ಯೆ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳು ಇಲ್ಲವಾಗುತ್ತವೆ. ಕಾರ್ಮಿಕರು 14ನೆ ವಯಸ್ಸಿನಿಂದ ನೊಂದಣಿ ಮಾಡಲು ಇದರಲ್ಲಿ ಅವಕಾಶ ಇರುವುದರಿಂದ ಬಾಲ ಕಾರ್ಮಿಕ ಪದ್ಧತಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಆರೋಪಿಸಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಮಿತಿ ಸಂಚಾಲಕರಾದ ಶೇಖರ್ ಬಂಗೇರ, ಸುರೇಶ್ ಕಲ್ಲಾಗರ್ ಮಾತನಾಡಿದರು. ಈ ಕುರಿತು ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು.

ಧರಣಿಯಲ್ಲಿ ಸಿಐಟಿಯು ಮುಖಂಡರಾದ ಗಣೇಶ್ ನಾಯಕ್, ಎಚ್. ನರಸಿಂಹ, ದಾಸು ಭಂಡಾರಿ, ಎಚ್.ವಿಠಲ್, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News