ಮಾಲ್‌ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ : ಡಿಸಿಪಿ
ಮಂಗಳೂರು, ಆ.9: ನಗರದ ಮಾಲ್‌ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುತ್ತಿದ್ದು, ನಿಯಮಾವಳಿ ಪ್ರಕಾರ ಶುಲ್ಕ ವಿಧಿಸುವಂತಿಲ್ಲ. ಮೈಸೂರಿನಲ್ಲಿ ಈ ಕುರಿತು ಪಾಲಿಕೆ ಹೊಸ ನಿಯಮಾಳಿ ರೂಪಿಸಿ ಜಾರಿಗೆ ತಂದಿದೆ. ನಗರದಲ್ಲೂ ಅದೇ ಮಾದರಿ ಅನುಸರಿಸಲು ಮೈಸೂರಿನಿಂದ ನಿಯಮಾವಳಿ ತರಿಸಿ, ಪಾಲಿಕೆ ಜತೆ ಚರ್ಚಿಸಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತರ ಅನುಪಸ್ಥಿತಿಯಲ್ಲಿ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು, ಮಾಲ್‌ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವುದರಿಂದ ಮಾಲ್ ಹೊರಭಾಗದಲ್ಲಿ ಬೇಕಾಬಿಟ್ಟಿಯಾಗಿ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಉತ್ತರ ನೀಡಿದ ಡಿಸಿಪಿ, ಮಾಹಿತಿಯಂತೆ ಪಾರ್ಕಿಂಗ್ ಗೆ ದುಡ್ಡು ನೀಡಿ, ಟೋಕನ್ ಪಡೆದು ಮಾಲ್‌ನಲ್ಲಿ ಖರೀದಿ ವೇಳೆ ಕೂಪನ್ ರೀತಿಯಲ್ಲಿ ಬಳಸಲಾಗ್ತುತದೆ. ಇದೊಂದು ಉತ್ತಮ ಕ್ರಮವಾಗಿದ್ದು, ಮನಪಾ ಕಮಿಷನರ್ ಜತೆ ಚರ್ಚಿಸಲಾಗುವುದು ಎಂದರು.
ಕೋಟ್ಪಾ ಪರಿಣಾಮಕಾರಿ ಜಾರಿಗೆ ಕ್ರಮ
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಕೆಲವು ಕಡೆ ಧೂಮಪಾನ ರಾಜಾರೋಷವಾಗಿ ನಡೆಯುತ್ತಿದೆ. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿಯೂ ಧೂಮಪಾನವನ್ನು ಸಾರ್ವಜನಿಕವಾಗಿ ಮಾಡುವಂತಿಲ್ಲ. ಕೆಲ ನಿರ್ದಿಷ್ಟ ಕಾಲೇಜುಗಳ ಹೊರಗಡೆಗಳಲ್ಲಿ ಧೂಮಪಾನ ನಡೆಸುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ಹೇಳಿದರು.
ಪ್ಲಾಸ್ಟಿಕ್ ನಿಷೇಧವಾದರೂ ಫ್ಲೆಕ್ಸ್ ಬ್ಯಾನರ್‌ಗಳಿಗಿಲ್ಲ ನಿಷೇಧ !
ಅಂಗಡಿಗಳಲ್ಲಿ ಮಾರಾಟ ಮಾಡುವ ಪ್ಲಾಸ್ಟಿಕ್ ಚೀಲಕ್ಕೂ ನಿಷೇಧ ಹೇರಲಾಗಿದೆ. ಆದರೆ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ಪ್ಲಾಸ್ಟಿಕ್‌ನಿಂದ ಮಾಡಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಮುಲ್ಕಿಯಲ್ಲಿ ಇಂತಹ ಸಾಕಷ್ಟು ಫ್ಲೆಕ್ಸ್‌ಗಳನ್ನು ಕಾಣಬಹುದು ಎಂದು ಸಾರ್ವಜನಿಕರೊಬ್ಬರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವಂತಿಲ್ಲ. ಇದಕ್ಕಾಗಿ ವಿಶೇಷ ಕಾನೂನೇ ಜಾರಿಯಲ್ಲಿದೆ. ಸಂಬಂಧಫಟ್ಟ ಇಲಾಖೆಗೆ ತಿಳಿಸಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವಿಗೆ ಕ್ರಮ ವಹಿಸಲಾಗುವುದು ಎಂದರು.
ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ !
ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಕುವ ಕ್ರಮವಿದೆ. ಹಾಗೆಯೇ ರಸ್ತೆಗಳಲ್ಲಿ ಗುಂಡಿಗಳಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆ ಆದಲ್ಲಿ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸುವ ಅವಕಾಶ ಇದೆ. ಬೆಂಗಳೂರಿನಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರ್ವಜನಿಕರ ದೂರೊಂದಕ್ಕೆ ಡಿಸಿಪಿ ಲಕ್ಷ್ಮೀ ಗಣೇಶ್ ಪ್ರತಿಕ್ರಿಯಿಸಿದರು.
ತಲಪಾಡಿಯಿಂದ ಪಂಪ್‌ವೆಲ್ ಹೋಗುವ ದಾರಿಯಲ್ಲಿ ನೇತ್ರಾವತಿ ಸೇತುವೆಯ ಅಂಚಿನ ಎರಡೂ ಕಡೆಗಳಲ್ಲಿ ಸೇತುವೆಯ ಕಾಂಕ್ರೀಟ್ ರಸ್ತೆಗೆ ಸಮಾಂತರವಾಗಿಲ್ಲ. ಇದರಿಂದ ಬಸ್ಸಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ದೈಹಿಕವಾಗಿ ಸಾಕಷ್ಟು ತೊಂದರೆ ಅನುಭವಿಸು ತ್ತಿದ್ದಾರೆ. ಹಳೆ ಸೇತುವೆಯಲ್ಲಿಯೂ ಈ ಅವ್ಯವಸ್ಥೆ ಇತ್ತು. ಇದೀಗ ಹೊಸ ಸೇತುವೆಯೂ ಹಾಗೆಯೇ ಇದೆ ಈ ಬಗ್ಗೆ ಕ್ರಮವಾಗಬೇಕು ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಗಮನಕ್ಕೆ ತರುವುದಾಗಿ ಡಿಸಿಪಿ ತಿಳಿಸಿದರು.