ಉನ್ನಾವೊ ಅತ್ಯಾಚಾರ ಪ್ರಕರಣ ನಿರ್ವಹಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಎಡವಿದ್ದರು:ಸಿಬಿಐ

Update: 2019-08-09 14:24 GMT

ಹೊಸದಿಲ್ಲಿ, ಆ.9: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಆರೋಪಿಯಾಗಿರುವ 2017ರ ಉನ್ನಾವೊ ಅತ್ಯಾಚಾರ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ನಿರ್ವಹಿಸಿದ ರೀತಿಯಲ್ಲಿ ಕೊರತೆಯಿತ್ತು ಎಂದು ಸಿಬಿಐ ದಿಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ.

ಉನ್ನಾವೊ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಆಸ್ಪತ್ರೆಗಳ ಪಾತ್ರ ಸೇರಿದಂತೆ ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಿರುವುದಾಗಿ ಸಿಬಿಐ ಜು.11ರಂದು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಿದೆ.

ಶಾಸಕರ ನಿವಾಸಕ್ಕೆ ತೆರಳುವಂತೆ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿದ್ದಕ್ಕಾಗಿ ಸೆಂಗಾರ್ ಸಹವರ್ತಿ ಶಶಿ ಸಿಂಗ್‌ನನ್ನೂ ಆರೋಪಿಯನ್ನಾಗಿ ಹೆಸರಿಸಲಾಗಿದೆ.

2017,ಜೂ.4ರಂದು ಸಿಂಗ್ ಬಾಲಕಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ಶಾಸಕರ ನಿವಾಸಕ್ಕೆ ಕರೆದೊಯ್ದಿದ್ದ ಮತ್ತು ಅಲ್ಲಿ ಸೆಂಗಾರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ವಿಷಯವನ್ನು ಯಾರಲ್ಲಿಯೂ ಬಾಯ್ಬಿಡದಂತೆ ಸೆಂಗಾರ್ ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದ. ಬಾಲಕಿ ಈ ಘಟನೆಯ ಬಗ್ಗೆ ಪೊಲೀಸ್ ದೂರು ಸಲ್ಲಿಸಲು ಪ್ರಯತ್ನಿಸಿದ್ದಳಾದರೂ ಸೆಂಗಾರ್ ಪ್ರಭಾವದಡಿ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.

2018,ಎ.3ರಂದು ಸೆಂಗಾರ್ ಸೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಆತನ ಗೂಂಡಾಗಳು ಸಂತ್ರಸ್ತೆಯ ತಂದೆಯನ್ನು ಸಾರ್ವಜನಿಕವಾಗಿ ಥಳಿಸಿದ್ದರು. ಆತನನ್ನು ಬಂಧಿಸಿ ಅಕ್ರಮ ಪಿಸ್ತೂಲು ಹೊಂದಿದ್ದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಆತ ಎ.9ರಂದು ನ್ಯಾಯಾಂಗ ಬಂಧನದಲ್ಲಿ ಕೊನೆಯುಸಿರೆಳೆದಿದ್ದ ಎಂದು ಸಿಬಿಐ ಪ್ರಕರಣದಲ್ಲಿ ಸಲ್ಲಿಸಿರುವ ಇನ್ನೊಂದು ಆರೋಪ ಪಟ್ಟಿಯಲ್ಲಿ ಹೇಳಿದೆ.

ಸಂತ್ರಸ್ತ ಬಾಲಕಿ ಮುಖ್ಯಮಂತ್ರಿ ಆದಿತ್ಯನಾಥ ನಿವಾಸದ ಎದುರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಬಳಿಕ ಎ.12ರಂದು ಮಖಿ ಪೊಲೀಸ್ ಠಾಣೆಯಲ್ಲಿ ಸೆಂಗಾರ್ ಮತ್ತು ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಉನ್ನಾವೊ ಅತ್ಯಾಚಾರ ಘಟನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸಲಾಗಿದ್ದು,ಜಿಲ್ಲಾ ನ್ಯಾಯಾಧೀಶ ಧರ್ಮೇಶ ಶರ್ಮಾ ಅವರು ದಿನನಿತ್ಯದ ಆಧಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಬಿಜೆಪಿಯು ಕಳೆದ ತಿಂಗಳು ಸೆಂಗಾರ್ ನನ್ನು ಪಕ್ಷದಿಂದ ಉಚ್ಚಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News