ಖಾಲಿ ಇರುವ 5 ಲಕ್ಷ ಬೋಧಕ ಹುದ್ದೆಗೆ ಶೀಘ್ರ ನೇಮಕಾತಿ: ಮಾನವ ಸಂಪನ್ಮೂಲ ಖಾತೆ ಸಚಿವ

Update: 2019-08-09 15:21 GMT

ಹೊಸದಿಲ್ಲಿ, ಆ. 9: ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸುವ ಅಗತ್ಯ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಗುರುವಾರ ತಿಳಿಸಿದ್ದಾರೆ.

ದೇಶಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಳ್ಲಿ 5 ಲಕ್ಷ ಬೋಧಕರ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಗಂಭೀರವಾಗಿ ಚಿಂತಿಸಬೇಕು ಎಂದು ನಿಶಾಂಕ್ ಹೇಳಿದ್ದಾರೆ. ನೂತನ ಶಿಕ್ಷಣ ನೀತಿ ಮಸೂದೆ ಬಗ್ಗೆ ಚರ್ಚೆ ನಡೆಸಲು ದಿಲ್ಲಿಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉನ್ನತ ಹಾಗೂ ತಾಂತ್ರಿಕ ಶಿಕ್ಷಣದ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ನೂತನ ಶಿಕ್ಷಣ ನೀತಿಯಲ್ಲಿ ಎಲ್ಲ ರಾಜ್ಯಗಳಿಗೆ ಪ್ರಮುಖ ಪಾತ್ರವಿದೆ ಎಂದು ಅವರು ಹೇಳಿದರು. ನೂತನ ಶಿಕ್ಷಣ ನೀತಿ ರೂಪಿಸುವ ಮೊದಲ ಸಾಕಷ್ಟು ಚಿಂತಿಸಬೇಕಿದೆ ಎಂದು ಒತ್ತಿ ಹೇಳಿದರು. ಶಿಕ್ಷಣ ನೀತಿ ಇಡೀ ದೇಶಕ್ಕೆ ಸಂಬಂಧಿಸಿದ್ದು. ಆದುದರಿಂದ ದೇಶದ ಶಿಕ್ಷಣ ನೀತಿಯಲ್ಲಿ ಪ್ರತಿಯೊಬ್ಬರು ಭಾಗವಹಿಸುವುದನ್ನು ಖಾತರಿಪಡಿಸಬೇಕು ಎಂದು ಅವರು ಹೇಳಿದರು. ಉನ್ನತ ಶಿಕ್ಷಣ ಹೆಚ್ಚು ಉದ್ಯೋಗ ನೀಡುವ, ಸಂಶೋಧನೆ ಆಧಾರಿತ, ನವೀನ ಹಾಗೂ ಉತ್ತರದಾಯಿಯಾಗಿರುವ ಅಗತ್ಯ ಇದೆ ಎಂದು ಅವರು ಹೇಳಿದರು. ಅಲ್ಲದೆ ಜಾಗತಿಕ ಗುಣಮಟ್ಟ ತಲುಪುವ ಮೂಲಕ ದೇಶದವನ್ನು ವಿಶ್ವಶಕ್ತಿಯಾಗಿ ಸ್ಥಾಪಿಸುವ ಪ್ರಮುಖ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಇದೆ ಎಂದು ನಿಶಾಂಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News