ಉಡುಪಿ ಜಿಲ್ಲೆಯಲ್ಲಿ ಮಳೆ-ಗಾಳಿಯಿಂದ ಮನೆಗಳಿಗೆ ಹಾನಿ
ಉಡುಪಿ, ಆ.9: ಮಳೆಯ ಪ್ರಮಾಣ ಎರಡು ದಿನಗಳಿಂದ ತಗ್ಗಿದ್ದರೂ, ಬೀಸುತ್ತಿರುವ ಗಾಳಿಯಿಂದಾಗಿ ಜಿಲ್ಲೆಯಾದ್ಯಂತ ಮನೆ ಹಾಗೂ ಇತರ ಸೊತ್ತು ಗಳಿಗಾಗುತ್ತಿರುವ ಹಾನಿಯ ಪ್ರಮಾಣದಲ್ಲಿ ಮಾತ್ರ ಇಳಿತ ಕಂಡುಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿ ಹಾಗೂ ಪ್ರತಿ ತಾಲೂಕು ಕಚೇರಿ ಗಳಲ್ಲಿರುವ ಪ್ರಾಕೃತಿಕ ವಿಕೋಪ ನಿಯಂತ್ರಣ ಕಚೇರಿಗಳಿಂದ ಸಿಕ್ಕಿದ ಮಾಹಿತಿಯಂತೆ ಇಂದು ಜಿಲ್ಲೆಯಲ್ಲಿ ಇಂದು 60ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ಆಸ್ತಿಪಾಸ್ತಿ ನಷ್ಟವಾಗಿದೆ.
ಕುಂದಾಪುರ ತಾಲೂಕು ಹಾಲಾಡಿ ಗ್ರಾಮದ ಗುಲಾಬಿ, ಬಳ್ಕೂರು ಗ್ರಾಮದ ಲಕ್ಷ್ಮೀ ಹಾಗೂ ಹಾಲಾಡಿ ಗ್ರಾಮದ ಗೋಪಾಲ ಎಂಬವರ ಮನೆಯ ತೋಟಗಾರಿಕಾ ಬೆಳೆಗಳಿಗೆ ಒಟ್ಟು ಅಂದಾಜು ಸುಮಾರು 50,000ರೂ.ಗಳ ನಷ್ಟ ಸಂಭವಿಸಿದೆ.
ಉಳಿದಂತೆ ಕಾರ್ಕಳ ತಾಲೂಕಿನಲ್ಲಿ 14 ಮನೆಗಳಿಗೆ, ಬೈಂದೂರಿನ 4, ಕುಂದಾಪುರದ 24 ಬ್ರಹ್ಮಾವರದ 11 ಹಾಗೂ ಕಾಪು ತಾಲೂಕಿನ 7 ಮನೆಗಳಿಗೆ ಸಂಪೂರ್ಣ ಅಥವಾ ಭಾಗಶ: ಹಾನಿಯಾದ ಬಗ್ಗೆ ವರದಿಗಳು ಬಂದಿವೆ.
ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಶೀನ ಮೊಯ್ಲಿ ಅವರ ಮನೆಗೆ 50 ಸಾವಿರ ರೂ., ನಂದಳಿಕೆ ಗ್ರಾಮದ ಮುತ್ತಯ್ಯ ಮೇರ ಮನೆಗೆ 25 ಸಾವಿರ ರೂ., ಬೈಂದೂರು ತಾಲೂಕು ಶಿರೂರು ಗ್ರಾಮದ ಶಮಿಮಾ ಇವರ ಮನೆಯ ಗೋಡೆ ಕುಸಿದು 50 ಸಾವಿರ ರೂ., ಬಡಾಕೆರೆ ಗ್ರಾಮದ ನಾಗವೇಣಿ ಎಂಬವರ ಮನೆ ಗಾಳಿಮಳೆಗೆ ಸಂಪೂರ್ಣ ಹಾನಿಗೊಂಡು 1.85 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಸಂತು ಎಂಬವರ ಮನೆಗೆ 70 ಸಾವಿರ ರೂ., ಮೊಳ್ಳಿ ಗ್ರಾಮದ ಬುಡ್ಡಿ ಎಂಬವರ ವಾಸ್ತವ್ಯದ ಮನೆಗೆ 1.50 ಲಕ್ಷ ರೂ., ಹಾಲಾಡಿ ಗ್ರಾಮದ ಶಂಕರನಾರಾಯಣ ಎಂಬವರ ಮನೆಗೆ 70 ಸಾವಿರ ರೂ., ಹೆಮ್ಮಾಡಿ ಗ್ರಾಮದ ಲಚ್ಚು ಎಂಬವರ ಮನೆಗೆ 75 ಸಾವಿರ ರೂ., ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಸೋಮ ಮರಕಾಲರ ಮನೆಗೆ 30 ಸಾವಿರ, ಯಡ್ತಾಡಿ ಗ್ರಾಮದ ನರಸಿಂಹ ಮೂರ್ತಿಯವರ ಮನೆಗೆ 25 ಸಾವಿರ ರೂ., ಹಾವಂಜೆ ಗ್ರಾಮದ ಗ್ಲೋರಿನ್ ಡಿಸೋಜರ ಮನೆಗೆ 30,000ರೂ. ಹಾನಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಕುಂದಾಪುರದ ರಾಮ ಮಂದಿರ ರಸ್ತೆಯಲ್ಲಿ ಇಂದು ಅಪರಾಹ್ನ ತೆಂಗಿನ ಮರವೊಂದು ಉರುಳಿ ಬಿದ್ದ ಪರಿಣಾಮ, ವಿದ್ಯುತ್ ತಂತಿ ಮುರಿದು ಬಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಬೈಂದೂರಿನ ಶೀರೂರಿನ ಕೋಣಿಮನೆಯಲ್ಲಿ ಇಂದು ಗಾಳಿಮಳೆಗೆ ತಿಮ್ಮಪ್ಪ ಆಚಾರಿ ಎಂಬವರ ದನದ ಕೊಟ್ಟಿಗೆಗೆ 50,000ರೂ., ಅದೇ ಊರಿನ ನಾಗಪ್ಪ ಆಚಾರಿಯವರ ಮನೆ ಸಂಪೂರ್ಣ ಹಾನಿಗೊಂಡು 50,000 ರೂ. ನಷ್ಚ ಸಂಭವಿಸಿದೆ.