×
Ad

ಕಾವ್ಯದ ಎದುರು ದೇಶ, ಧರ್ಮ, ಕಾಲ ಶೂನ್ಯ: ಡಾ.ಮಠಪತಿ

Update: 2019-08-09 21:47 IST

ಉಡುಪಿ, ಆ.9: ದೇಶ, ಧರ್ಮ, ಕಾಲವನ್ನು ಶೂನ್ಯವಾಗಿಸುವುದೇ ನಿಜ ವಾದ ಕಾವ್ಯ. ಅಖಂಡವಾಗಿರುವ ಕಾವ್ಯ ಯಾರನ್ನು ವಿಭಜಿಸುವ ಕಾರ್ಯ ಮಾಡಲ್ಲ. ಕಾವ್ಯದ ಧರ್ಮಕ್ಕೂ ಉದ್ದೇಶಕ್ಕೂ ಅನೇಕ ಸಾಮ್ಯತೆಗಳಿವೆ ಎಂದು ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ ಡಾ.ರಾಜಶೇಖರ ಮಠಪತಿ ಹೇಳಿದ್ದಾರೆ.

 ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ‘ಅಲ್ಲಮನ ಗಜಲ್‌ಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತಿದ್ದರು.

ಮನುಷ್ಯನ ಆಂತರಿಕ ತುಮುಲಗಳನ್ನು ಕಾವ್ಯ ಅಭಿವ್ಯಕ್ತಿಸುತ್ತದೆ. ಕಾವ್ಯ ತನ್ನ ಓದಿನ ಬಳಿಕವೂ ಮನಸ್ಸಿನಲ್ಲಿ ಹುಟ್ಟಿಸುವ ಕಾವ್ಯ ಅತ್ಯುತ್ತಮವಾದುದು. ಅಲ್ಲಮನ ಗಜಲ್‌ಗಳು ಜೀವನಪರ ಕಾವ್ಯ. ಮನಸ್ಸಿನ ಏರಿಳಿತಗಳನ್ನು ಗಜಲ್ ಗಳ ಸಾಲುಗಳಲ್ಲಿ ಹಿಡಿದಿಟ್ಟಿರುವುದು ಇದರ ವಿಶೇಷತೆ. ಕಾವ್ಯದ ಶಕ್ತಿಯನ್ನು ಅರಿಯುವ ಪ್ರಯತ್ನ ಕಾವ್ಯಾನ್ವೇಷಣೆಯ ಮೂಲಕ ಆಗಬೇಕಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಗಿರೀಶ ಜಕಾಪುರೆ ಮಾತನಾಡಿ, ಸಾಹಿತ್ಯ ಮತ್ತು ಸಮಾಜ ಪ್ರತಿಯೊಬ್ಬರ ಬದುಕಿನ ಆಯಾಮಗಳು. ಸಮಾಜ ವನ್ನು ಬಿಟ್ಟು ಸಾಹಿತ್ಯವಿಲ್ಲ. ಒಬ್ಬ ಸಾಹಿತಿ ತನ್ನ ಸಾಹಿತ್ಯ ಪ್ರಕಾರವನ್ನು ಕಂಡುಕೊಳ್ಳಲು ಬರವಣಿಗೆಯಲ್ಲಿ ಬಹುದೂರ ಸಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಸದಾ ಕಾಲ ಅಮರವಾಗಿರುವ ಕಾವ್ಯ ಯುಗ ಯುಗಾಂತರದಲ್ಲಿ ಮನುಷ್ಯ ಕುಲ ಕೋಟಿಯನ್ನು ಬೆಸೆಯುವ ಕೊಂಡಿಯಾಗಿದೆ. ಕಾವ್ಯ ಎಂಬುದು ಪ್ರತಿ ಯೊಬ್ಬರ ಎದೆಯ ಮಿಡಿತ ಹಾಗೂ ಕರುಳ ಕರುಣೆಯಾಗಿದೆ ಎಂದು ಅವರು ಹೇಳಿದರು.

ಹಿರಿಯ ಲೇಖಕ ಬೆಳಗೋಡು ರಮೇಶ್ ಭಟ್ ‘ಕಡೆಂಗೋಡ್ಲು ಕಾವ್ಯದ ಪುನರವಲೋಕನ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಣಿಪಾಲ ಅಕಾಡೆಮಿ ಅಪ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ್ ಉಪಸ್ಥಿತರಿ ದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಪುಲ್ಲ ವಂದಿಸಿದರು. ಸುಶ್ಮಿತಾ ಎ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News