ಎನ್‌ಡಿಟಿವಿ ಸ್ಥಾಪಕರಿಗೆ ವಿದೇಶ ಪ್ರಯಾಣಕ್ಕೆ ತಡೆ
ಹೊಸದಿಲ್ಲಿ, ಆ. 9: ಎನ್‌ಡಿಟಿವಿಯ ಸಹ ಸ್ಥಾಪಕರಾದ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಅವರ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ತಡೆ ಒಡ್ಡಲಾಗಿದೆ. ಸಿಬಿಐ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಬ್ಬರಿಗೆ ವಿದೇಶಕ್ಕೆ ಹಾರಾಟ ನಡೆಸಲು ವಿಮಾನ ನಿಲ್ದಾಣದ ಪ್ರಾಧಿಕಾರ ಅವಕಾಶ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಅವರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ಘಟನೆ ಬಗ್ಗೆ ಹೇಳಿಕೆ ನೀಡಿರುವ ಎನ್‌ಡಿಟಿವಿ, ‘‘ಇದು ಮಾಧ್ಯಮ ಸ್ವಾತಂತ್ರವನ್ನು ಸಂಪೂರ್ಣವಾಗಿ ಬುಡಮೇಲು ಮಾಡುವ ಹುನ್ನಾರ’’ ಎಂದಿದೆ. ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಅವರಿಗೆ ಇಂದು ವಿದೇಶಕ್ಕೆ ತೆರಳಲು ಅವಕಾಶ ನೀಡದೇ ಇರುವುದು ಮೂಲ ಭೂತ ಹಕ್ಕುಗಳನ್ನು ಸಂಪೂರ್ಣ ಧ್ವಂಸ ಮಾಡುವ ಯತ್ನ ಎಂದು ಎನ್‌ಡಿಟಿವಿ ಸರಣಿ ಟ್ವೀಟ್‌ನಲ್ಲಿ ಹೇಳಿದೆ.
ಇಬ್ಬರೂ ಪತ್ರಕರ್ತರು ಆಗಸ್ಟ್ 16ಕ್ಕೆ ಹಿಂದಿರುಗುವ ಟಿಕೆಟ್ ತೆಗೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಸಿಬಿಐ ದಾಖಲಿಸಿದ ನಕಲಿ ಹಾಗೂ ಆಧಾರ ರಹಿತ ಪ್ರಕರಣದ ಹಿನ್ನೆಲೆಯಲ್ಲಿ ಅವರು ವಿದೇಶಕ್ಕೆ ಪ್ರಯಾಣಿಸುವುದಕ್ಕೆ ತಡೆ ಒಡ್ಡಲಾಗಿದೆ ಎಂದು ಎನ್‌ಡಿಟಿವಿ ಹೇಳಿದೆ.