ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ನಿರಂಜನ್ ಭಟ್ ಜಾಮೀನು ತಿರಸ್ಕೃತ
ಉಡುಪಿ, ಆ.9: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲು ಇಂದು ವಜಾಗೊಳಿಸಿ ಆದೇಶ ನೀಡಿದೆ.
ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಒಂದು ತಿಂಗಳ ಕಾಲ ಜಾಮೀನು ನೀಡುವಂತೆ ಕೋರಿ ನಿರಂಜನ್ ಭಟ್ ತನ್ನ ವಕೀಲ ವಿಕ್ರಂ ಹೆಗ್ಡೆ ಮೂಲಕ ಜು.30ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಈ ಬಗ್ಗೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಆರೋಪಿಗೆ ಜಾಮೀನು ನಿರಾಕರಿಸಿ ಆದೇಶ ನೀಡಿದರು.
ಅನಾರೋಗ್ಯದಿಂದ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಆರೋಪಿಯ ತಂದೆ, ಪ್ರಕರಣದ ಸಾಕ್ಷ ನಾಶ ಆರೋಪಿ ಶ್ರೀನಿವಾಸ್ ರಾವ್ ಅವರನ್ನು ಪೊಲೀಸ್ ಭದ್ರತೆಯಲ್ಲಿ ಒಂದು ದಿನ ಭೇಟಿ ಮಾಡಲು ನ್ಯಾಯಾಧೀಶರು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಮೊದಲು ಆರೋಪಿಯನ್ನು ತಾತ್ಕಾಲಿಕವಾಗಿ ಮಂಗಳೂರು ಸಬ್ ಜೈಲಿಗೆ ಸ್ಥಳಾಂತರಿಸುವಂತೆ ಸಂಬಂಧ ಪಟ್ಟವರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.