ಕಟೀಲು ಅರ್ಚಕರ ಮನೆ ಡಕಾಯಿತಿ ಪ್ರಕರಣ: 12ನೇ ಆರೋಪಿ ಸೆರೆ
ಮಂಗಳೂರು, ಆ. 9: ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಎಂಬವರ ಮನೆಯಲ್ಲಿ ನಡೆದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಳ್ಳಾಲ ಸೋಮೇಶ್ವರದ ನಿವಾಸಿ ಚಂದ್ರಹಾಸ ಪೂಜಾರಿ ಯಾನೆ ಸೋಮೇಶ್ವರ ಚಂದ್ರ (42) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
2016ರ ಅಕ್ಟೋಬರ್ 4ರಂದು ಬೆಳಗ್ಗಿನಜಾವ ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಎಂಬರ ಮನೆಗೆ ಮಾರಕಾಯುಧ ಮತ್ತು ರಿವಾಲ್ವರ್‌ಗಳೊಂದಿಗೆ ಅಕ್ರಮವಾಗಿ ಮನೆ ಪ್ರವೇಶಿಸಿ ಮನೆಯಲ್ಲಿದ್ದ ಅರ್ಚಕ ವಾಸುದೇವ ಆಸ್ರಣ್ಣನವರ ಪುತ್ರ ದೇವಿಕುಮಾರ ಆಸ್ರಣ್ಣ ಹಾಗೂ ಮನೆಯಲ್ಲಿದ್ದವರನ್ನು ಕಟ್ಟಿಹಾಕಿ 80ಪವನ್ ಚಿನ್ನಾಭರಣ ಹಾಗೂ ನಗದು ದರೋಡೆಗೈದು ತಪ್ಪಿಸಿಕೊಂಡ್ದಿರು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಸೋಮೇಶ್ವರ ನಿವಾಸಿ ಚಂದ್ರ ಯಾನೆ ಸೋಮೇಶ್ವರ ಚಂದ್ರ ಎಂಬಾತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತ ಊರಿಗೆ ಬಂದ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯತ್ನ ಆರೋಪಿ: ಆರೋಪಿ ಮುಂಬೈಯಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದು, ಈತನ ವಿರುದ್ಧ ಮುಂಬೈಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತನಿಗೆ ಏಳು ವರ್ಷಗಳ ಕಾಲ ಶಿಕ್ಷೆಯಾಗಿದೆ. ಈತನ ವಿರುದ್ಧ ಉಳ್ಳಾಲ, ಕಾವೂರು, ಬರ್ಕೆ, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ಬಜ್ಪೆ ಠಾಣೆಗೆ ಹಸ್ತಾಂತರಿಸಲಾಗಿದೆ.