ಗದಗ್ ನಲ್ಲಿ ಲಾಠಿ ಚಾರ್ಜ್ ಖಂಡನೀಯ: ಸಿಎಂ ಕ್ಷಮೆಯಾಚನೆಗೆ ಯು.ಟಿ.ಖಾದರ್ ಆಗ್ರಹ
ಮಂಗಳೂರು, ಆ.9: ಪ್ರವಾಹಪೀಡಿತ ಪ್ರದೇಶಕ್ಕೆ ತೆರಳಿದ ಸಂದರ್ಭ ಆಕ್ರೋಶ ವ್ಯಕ್ತ ಪಡಿಸಿದವರ ಮೇಲೆ ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ಗದಗ್ ನಲ್ಲಿ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಅದಕ್ಕಾಗಿ ಮುಖ್ಯಮಂತ್ರಿ ತಕ್ಷಣ ಕ್ಷಮೆಯಾಚನೆ ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಸಂತ್ರಸ್ತರ ಆಕ್ರೋಶ ಸಹಜ. ಅವರ ನೋವನ್ನು ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಈ ಹಿಂದಿನ ಸರಕಾರದ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ನಡೆದಿದೆ. ಕೊಡಗಿನಲ್ಲಿ ಹಿಂದೆ ನಡೆದ ಪರಿಹಾರ ಕಾರ್ಯದ ರೀತಿಯ ಪರಿಹಾರ ಕಾರ್ಯ ರಾಜ್ಯದಲ್ಲಿ ಮತ್ತು ನೆರೆಪೀಡಿತ ಪ್ರದೇಶದಲ್ಲಿ ಆಗಬೇಕು ಎಂದು ಖಾದರ್ ಒತ್ತಾಯಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ತಕ್ಷಣ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕಾಗಿದೆ. ಕಳೆದ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿನ ಸರಕಾರ ರೈತರು ರಸಗೊಬ್ಬರ ಕೇಳಿದಾಗ ಅವರ ಮೇಲೆ ಗೋಲಿಬಾರ್ ನಡೆಸಿದ್ದನ್ನು ಶಾಸಕರು ಪುನರುಚ್ಚರಿಸಿದರು.
ಈ ಬಾರಿ ಸಂತ್ರಸ್ತರು ನೋವನ್ನು ವ್ಯಕ್ತಪಡಿಸಿದಾಗ ಲಾಠಿ ಚಾರ್ಜ್ ಮಾಡಿರುವುದು ಅಮಾನವೀಯ ಕ್ರಮವಾಗಿದೆ. ನೆರೆ ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಕೆಲಸ ಮಾಡಬೇಕಾಗಿದೆ. ಅಲ್ಲದೆ, ಸಹಾಯ-ಸಹಕಾರ ಅತ್ಯಗತ್ಯ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.