ದಲಿತ ಯುವಕನ ಕೊಲೆ ಪ್ರಕರಣ: 24 ಮಂದಿಗೆ ಜೀವಾವಧಿ

Update: 2019-08-09 18:03 GMT

ಚಂಡೀಗಢ,ಆ.9: 27 ವರ್ಷ ವಯಸ್ಸಿನ ದಲಿತನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮದ್ಯದೊರೆ ಶಿವಲಾಲ್ ದೋಡಾ ಹಾಗೂ ಆತನ ಸೋದರಳಿಯ ಅಮಿತ್ ದೋಡಾ ಸೇರಿದಂತೆ 24 ಮಂದಿಗೆ ಪಂಜಾಬ್‌ನ ನ್ಯಾಯಾಲವೊಂದು ಗುರುವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

 ಪ್ರಕರಣದಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ಹಾಗೂ ಸೆಶನ್ಸ್ ನಾಯಾಧೀಶ ಫಝಿಲ್ಕಾ ವರ್ಮಾ ಅವರು ಇಂದು ತೀರ್ಪು ಘೋಷಿಸಿದ್ದಾರೆ. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ದೋಷಮುಕ್ತಗೊಳಿಸಲಾಗಿದ್ದು, ಇನ್ನೊಬ್ಬನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.

    2015ರ ಡಿಸೆಂಬರ್ 11ರಂದು ದಲಿತ ಯುವಕ ಭೀಮ್‌ಸೇನ್ ಟಾಂಕ್ ಹಾಗೂ ಆತನ ಸಹಚರ ಗುರ್ಜಂತ್ ಸಿಂಗ್ ಮೇಲೆ ರಾಮ್ಸಾರಾದಲ್ಲಿರುವ ಶಿವಲಾಲ್ ದೋಡಾನ ತೋಟದ ಮನೆಯಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ದೋಡಾ ಜೊತೆಗಿನ ವಿವಾದವನ್ನು ಇತ್ಯರ್ಥಪಡಿಸಲು ಭೀಮ್‌ಸೇನ್ ಹಾಗೂ ಗುರ್ಜಂತ್‌ಸಿಂಗ್ ಬಂದಿದ್ದರು. ಆಗ ಆರೋಪಿಗಳು ಟಾಂಕ್‌ನ ಕೈ,ಕಾಲುಗಳನ್ನು ಹರಿತವಾದ ಆಯುಧಗಳಿಂದ ಕತ್ತರಿಸಿದ್ದರು ಹಾಗೂ ಗುರ್ಜಂತ್‌ಸಿಂಗ್ ಕೈಯನ್ನು ಕಡಿದುಹಾಕಿದ್ದಲ್ಲದೆ, ಆತನ ಕಾಲನ್ನು ಕೂಡಾ ಮುರಿದಿದ್ದರು. ಆದಾಗ್ಯೂ ಗುರ್ಜಂತ್‌ಸಿಂಗ್ ಬದುಕುಳಿದಿದ್ದ. ಗಂಭೀರ ಗಾಯಗೊಂಡಿದ್ದ ಭೀಮ್‌ಸೇನ್ ಅಮೃತ ಸರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

  ಪ್ರಕರಣಕ್ಕೆ ಸಂಬಂಧಿಸಿ 60 ಮಂದಿ ಸಾಕ್ಷಿದಾರರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಅವರಲ್ಲಿ 9 ಮಂದಿ ಪ್ರತಿಕೂಲ ಸಾಕ್ಷಿಗಳಾಗಿ ತಿರುಗಿಬಿದ್ದರು.

  ಆದಾಗ್ಯೂ ಭೀಮ್‌ಸೇನ್ ಟಾಂಕ್ ಹಾಗೂ ಗುರ್ಜಂತ್‌ಸಿಂಗ್ ಕುಟುಂಬಕ್ಕೆ 10 ಕೋಟಿ ರೂ. ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಆರೋಪಿಗಳ ವಿರುದ್ಧ ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ದಾಖಲಿಸಲಾದ ಆರೋಪಗಳನ್ನು ಕೂಡಾ ನ್ಯಾಯಾಧೀಶರು ತಿರಸ್ಕರಿಸಿದ್ದಾರೆಂದು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುರೀಂದರ್‌ಪಾಲ್ ಸಿಂಗ್ ಟೀನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News