ಶಿರಾಡಿ ಘಾಟ್‌: ಆ.12ರವರೆಗೆ ವಾಹನ ಸಂಚಾರ ನಿಷೇಧ

Update: 2019-08-09 18:20 GMT

ಮಂಗಳೂರು, ಆ.9: ಶಿರಾಡಿ ಘಾಟ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಗುಡ್ಡಕುಸಿತದ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಆ.12ರವರೆಗೆ ಷರತ್ತು ಬದ್ಧವಾಗಿ ಎಲ್ಲ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನಿಷೇಧಿಸಿ ಆದೇಶಿಸಿದ್ದಾರೆ.

ಶಿರಾಡಿ ಘಾಟ್‌ ಭಾಗದಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ಚಾರ್ಮಾಡಿಯ ಹಲವೆಡೆ ಗುಡ್ಡ ಕುಸಿತ ಜಾಗದಲ್ಲಿ ಪದೇಪದೇ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ಕಷ್ಟಸಾಧ್ಯವಾಗಿದ್ದು, ವಾಹನ ಸಂಚಾರ ನಿಷೇಧವನ್ನು ಷರತ್ತಿನ ಮೇರೆಗೆ ಮತ್ತೆ ಮೂರು ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಶುಕ್ರವಾರದಿಂದ ಆ.12ರವರೆಗೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಅಗತ್ಯ ವಸ್ತುಗಳ ಕಾಯ್ದೆ ಅಡಿ ಬರುವ ಸಾಮಗ್ರಿಗಳ ಸಾಗಣೆ ವಾಹನಗಳನ್ನು ಸಾರ್ವಜನಿಕ ಸಾರಿಗೆ ಬಸ್ ಸಂಚಾರ (ಷರತ್ತುಬದ್ಧ) ಹೊರತುಪಡಿಸಿ ಉಳಿದ ಎಲ್ಲ ತರಹದ ವಾಹನಗಳು ಹಾಗೂ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಷರತ್ತುಗಳು: ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಸಾಮಗ್ರಿಗಳ ಸಾಗಣೆ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಉಪಕರಣಗಳು, ಔಷಧಿ, ಆಹಾರ, ಸಾಕಷ್ಟು ಕುಡಿಯುವ ನೀರು ಸಂಗ್ರಹಿಸಿಕೊಳ್ಳುವುದು. ವಾಹನಗಳ ಪರವಾನಿಗೆ ದಾಖಲಾತಿ ಹಾಗೂ ವಾಹನದಲ್ಲಿರುವ ಅಗತ್ಯ ವಸ್ತುಗಳು ಹೊಂದಿರುವ ಬಗ್ಗೆ ದಾಖಲಾತಿಗಳನ್ನು ಕಡ್ಡಾಯವಾಗಿ ತಪಾಸಣಾ ಅಧಿಕಾರಿಗಳಿಗೆ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆ.11ರವರೆಗೆ ರೆಡ್ ಅಲರ್ಟ್

ಕರಾವಳಿ ಜಿಲ್ಲೆ ದ.ಕ.ದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ 150ರಿಂದ 260 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ 3.2 ರಿಂದ 3.9 ಮೀಟರ್‌ಗಳಷ್ಟು ಎತ್ತರವಾಗಿದ್ದು, ಮೀನುಗಾರರು ಸಮುದ್ರವನ್ನು ಪ್ರವೇಶಿಸುವಂತಿಲ್ಲ. ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್ ರಸ್ತೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಸಂಪಾಜೆ ಘಾಟ್ ತೆರೆದಿದ್ದು, ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News