ವಿಮಾನ ದುರಂತ: ಪುತ್ರಿ ಸಹಿತ ಭಾರತೀಯ ವೈದ್ಯ ದಂಪತಿ ಮೃತ್ಯು

Update: 2019-08-10 03:53 GMT
ಡಾ.ಜಸ್ವೀರ್ ಖುರಾನಾ

ವಾಷಿಂಗ್ಟನ್, ಆ.10: ಫಿಲಿಡೆಲ್ಫಿಯಾದಲ್ಲಿ ಸಂಭವಿಸಿದ ಲಘು ವಿಮಾನ ದುರಂತವೊಂದರಲ್ಲಿ ಭಾರತೀಯ ಮೂಲದ ವೈದ್ಯ ದಂಪತಿ ಹಾಗೂ ಪುತ್ರಿ ಮೃತಪಟ್ಟಿದ್ದಾರೆ.

 ಫಿಲಿಡೆಲ್ಫಿಯಾದ ಹೊರವಲಯದಲ್ಲಿ ಈ ಖಾಸಗಿ ವಿಮಾನ ಅಪಘಾತಕ್ಕೀಡಾಗಿದ್ದು, ವಾಷಿಂಗ್ಟನ್‌ನಲ್ಲಿ ಖ್ಯಾತ ವೈದ್ಯರಾಗಿದ್ದ ಡಾ.ಜಸ್ವೀರ್ ಖುರಾನಾ (60), ಪತ್ನಿ ಹಾಗೂ ವೈದ್ಯೆ ದಿವ್ಯಾ ಖುರಾನಾ (54) ಹಾಗೂ ಪುತ್ರಿ ಕಿರಣ್ ಖುರಾನಾ ಮೃತಪಟ್ಟಿದ್ದಾರೆ. ನತದೃಷ್ಟ ವಿಮಾನದಲ್ಲಿ ಇಲ್ಲದ ಮತ್ತೊಬ್ಬ ಪುತ್ರಿ ಮಾತ್ರ ಇಡೀ ಕುಟುಂಬದಲ್ಲಿ ಉಳಿದುಕೊಂಡಿದ್ದಾಳೆ.

44 ವರ್ಷ ಹಳೆಯ ವಿಮಾನವನ್ನು ಹೊಂದಿದ್ದ ಖುರಾನಾ, ಲೈಸನ್ಸ್ ಹೊಂದಿದ ಪೈಲಟ್ ಕೂಡಾ ಆಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ದಿಲ್ಲಿಯ ಎಐಐಎಂಎಸ್‌ನಲ್ಲಿ ಶಿಕ್ಷಣ ಪಡೆದು ಅಲ್ಲೇ ಸಂಶೋಧನೆ ನಡೆಸಿದ ಈ ವೈದ್ಯ ದಂಪತಿ ಎರಡು ದಶಕಗಳ ಹಿಂದೆ ಅಮೆರಿಕಕ್ಕೆ ಬಂದು ನೆಲೆಸಿದ್ದರು.

ಕೊಲಂಬಸ್‌ನಲ್ಲಿರುವ ಓಹಿಯೋ ಸರ್ಕಾರಿ ವಿವಿ ವಿಮಾನ ನಿಲ್ದಾಣದತ್ತ ತೆರಳುವ ಸಂದರ್ಭದಲ್ಲಿ ಈಶಾನ್ಯ ಫಿಲಿಡೆಲ್ಫಿಯಾ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪವೇ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News