ಮಂಗಳೂರು: ಕನ್ಹಯ್ಯ ಕುಮಾರ್ ವಿರುದ್ಧ ಪ್ರತಿಭಟನೆಗೆ ಯತ್ನಿಸಿದವರು ಪೊಲೀಸ್ ವಶಕ್ಕೆ

Update: 2019-08-10 07:06 GMT

ಮಂಗಳೂರು, ಆ.10: ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಇಂದು ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕನ್ಹಯ್ಯ ಕುಮಾರ್ ಭಾಗವಹಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ ಎಬಿವಿಪಿ ಹಾಗೂ ರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಹಿರಿಯ ಸ್ವಾತಂತ್ರ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯ ಧುರೀಣ ಬಿ.ವಿ.ಕಕ್ಕಿಲ್ಲಾಯರ ಜನ್ಮ ಶತಾಬ್ದಿ ಅಂಗವಾಗಿ ಸಹೋದಯ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಭಾಷಣಕಾರರಾಗಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಗವಹಿಸಿದ್ದಾರೆ. ಕನ್ಹಯ್ಯ ಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಎಬಿವಿಪಿ ಕಾರ್ಯಕರ್ತರೆನ್ನಲಾದ 4, 5 ಮಂದಿ ಸಭಾಂಗಣದೊಳಗೆ ಪ್ರವೇಶಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಇದೇ ವೇಳೆ ಸಭಾಂಗಣದ ಹೊರಗೆ ಜಮಾಯಿಸಿದ್ದ ಎಬಿವಿಪಿ, ರಾಮ ಸೇನೆ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೆನ್ನಲಾದವರು ಘೋಷಣೆಗಳನ್ನು ಕೂಗಲಾರಂಭಿಸಿದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಕನ್ಹಯ್ಯ ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ ಸಂಘ ಪರಿವಾರ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹರಿಯಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News