×
Ad

ಹರೇಕಳ, ಇನೋಳಿ ನದಿ ತಟದ ಪ್ರದೇಶಗಳು ಜಲಾವೃತ

Update: 2019-08-10 12:48 IST

ಕೊಣಾಜೆ, ಆ.10: ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹರೇಕಳ, ಇನೋಳಿನ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಈ ಭಾಗದ ನದಿ ಸಮೀಪದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಪ್ರಮುಖವಾಗಿ ಹರೇಕಳ ಸಮೀಪದ ಬೈತಾರ್, ಉಳಿಯ, ಕಡವಿನ ಬಳಿಯ ಪ್ರದೇಶಗಳು ಸೇರಿದಂತೆ ಇನೋಳಿಯ ನದಿ ತಟದ ತಗ್ಗು ಪ್ರದೇಶಗಳಲ್ಲಿ ನೇತ್ರಾವತಿ ನೀರಿನ ಹರಿವು ಅಪಾಯಮಟ್ಟದಲ್ಲಿ ಏರುತ್ತಿದೆ. ಹರೇಕಳದ ಬೈತಾರ್, ಉಳಿಯ ಪ್ರದೇಶ ವ್ಯಾಪ್ತಿಯ ರಾಕೇಶ್, ಸಿಫ್ರಿ, ಥಾಮಸ್, ಫ್ರಾಂಕ್ಲಿಯನ್, ರಾಬರ್ಟ ಎಂಬವರ ಕುಟುಂಬಗಳ ಸದಸ್ಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳೀಯರು ಸ್ಥಳಾಂತರಿಸಿ ರಕ್ಷಿಸಿದ್ದಾರೆ. ಅಲ್ಲದೆ ಜಲಾವೃತ ಮನೆಗಳ ಸಾಕು ಪ್ರಾಣಿಗಳನ್ನು ಕೂಡಾ ದೋಣಿಯ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ಯುವಕರಾದ ಲತೀಫ್, ಆಸಿಫ್, ಅನ್ವರ್, ಮಹಮ್ಮದ್, ಬಶೀರ್ ಎಸ್.ಎಂ. ಸೇರಿಂದತೆ ವಿವಿಧ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಸಹಕರಿಸುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸಂಜೆ ಈ ಪ್ರದೇಶಕ್ಕೆ ಬಂದು ತೆರಳಿದ್ದರು.

ಮುನ್ನೂರು ಗ್ರಾಮದಲ್ಲಿ ರಕ್ಷಣೆ: ಮುನ್ನೂರು ಗ್ರಾಮದ ಸೋಮನಾಥ ಉಳಿಯದ ಹಿರಿಯರು, 12 ದಿನದ ಮಗು, ಬಾಣಂತಿ ಸೇರಿದಂತೆ ಈ ಭಾಗದ ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭ ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾಪಂ ಉಪಾಧ್ಯಕ್ಷ ಹರೀಶ್, ರವೀಂದ್ರ ಶೆಟ್ಟಿ, ಪ್ರಕಾಶ್ ಸಿಂಪೋಣಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿದ್ದಾರೆ.

ಇನೋಳಿಯಲ್ಲಿ 45 ಮನೆಗಳು ಜಲಾವೃತ:

ಇನೋಳಿ ಪ್ರದೇಶದ ಕೆಳಗಿನ ಕರೆ ಹಾಗೂ ಇತರ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಸುಮಾರು 45 ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೂ ನೀರು ನುಗ್ಗಿದೆ. ಅಲ್ಲದೆ ಈ ಭಾಗದ ಜನರನ್ನು ಶುಕ್ರವಾರ ರಾತ್ರಿಯೇ ಸ್ಥಳಾಂತರಗೊಳಿಸಲಾಗಿದೆ. ಮಂಗಳೂರು ತಾಲೂಕು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ಭೇಟಿ ನೀಡಿದ್ದರು. ಗುರುವಾರದಿಂದ ತುಂಬೆ ಡ್ಯಾಂನಿಂದ ನೀರು ಹರಿಯ ಬಿಟ್ಟ ಪರಿಣಾಮ ಈ ಪ್ರದೇಶದಲ್ಲಿ ನದಿ ನೀರಿನ ಹರಿವು ಏಕಾಏಕಿ ಹೆಚ್ಚಿದೆ.

ಇನೋಳಿಯ ಸುಣ್ಣದ ಕಲ್ಲು ಪ್ರದೇಶ, ಬೋಳಿಯಾರು ಪಂಚಾಯಿತ್ ವ್ಯಾಪ್ತಿಯ ಅಮ್ಮೆಂಬಳ ರಂತಡ್ಕ, ಪಾವೂರು ಗ್ರಾಮದ ಕಿಲ್ಲೂರು ಪ್ರದೇಶಗಳಲ್ಲೂ ಗದ್ದೆ, ತೋಟಗಳು ಜಲಾವೃತಗೊಂಡಿದೆ.

ಉಳಿಯ ದ್ವೀಪದ ಜನರು ಆತಂಕದಲ್ಲಿ:

ನೇತ್ರಾವತಿ ನದಿಯ ನೀರಿನ ಹರಿವು ಹೆಚ್ಚಾಗಿರುವುದರಿಂದ ಇಲ್ಲಿಯ ಉಳಿಯ ದ್ವೀಪದಲ್ಲಿ ವಾಸಿಸುತ್ತಿರುವ ಹಲವು ಕುಟುಂಬದ ಜನರು ಆತಂಕದಲ್ಲಿದ್ದಾರೆ. ಇಲ್ಲಿಯ ಕೆಲವು ಕುಟುಂಬದ ಸದಸ್ಯರು ಶುಕ್ರವಾರ ಸಂಜೆಯೇ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಕುತ್ತಾರು ರಾಣಿಪುರ ಚರ್ಚ್ ಬಳಿಯ ಹೊಸದೋಟ ನಾರಾಯಣ ಕೊಟ್ಟಾರಿ ಅವರ ಮನೆಗೆ ಬೃಹತ್ ಮರಬಿದ್ದು ಭಾಗಶಃ ಹಾನಿಯಾಗಿದೆ. ಗೋಡೆ ಕುಸಿದಿದ್ದು, ಹಂಚು ಪುಡಿಯಾಗಿದೆ. 

ಅಂಬ್ಲಮೊಗರು ಗ್ರಾಮದ ಗಟ್ಟಿಕುದ್ರು, ಎಲಿಯಾರ್ ಪ್ರದೇಶಗಳಲ್ಲಿ ಕೂಡಾ ನೆರೆ ಪರಿಸ್ಥಿತಿ ಉಂಟಾಗಿದೆ.

1974ರಲ್ಲಿ ನೆರೆ ಬಂದಿತ್ತು:

1974ರಲ್ಲಿ ನೇತ್ರಾವತಿ ನದಿಯಲ್ಲಿ ನದಿಯಲ್ಲಿ ನೆರೆ ಬಂದ ಪರಿಣಾಮ ಹರೇಕಳ, ಇನೋಳಿಯ ನದಿ ತಟದ ಪ್ರದೇಶವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು ಎಂದು ಈ ಭಾಗದ ಹಿರಿಯರು ನೆನಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News