ಬೆಳ್ತಂಗಡಿಯಲ್ಲಿ ಪ್ರವಾಹ ಮುಂದುವರಿಕೆ: ಕೊಚ್ಚಿ ಹೋದ ಎರಡು ಸೇತುವೆ
Update: 2019-08-10 13:21 IST
ಬೆಳ್ತಂಗಡಿ, ಆ.10: ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಮುಂದುವರಿದಿದ್ದು, ಜನತೆ ತತ್ತರಿಸಿದ್ದಾರೆ. ಈ ನಡುವೆ ಚಾರ್ಮಾಡಿಯಲ್ಲಿ ಎರಡು ಸೇತುವೆಗಳು ಕೊಚ್ಚಿ ಹೋಗಿವೆ.
ಘಾಟ್ ಪ್ರದೇಶದಿಂದ ಮಣ್ಣು, ಕಲ್ಲು ಮಿಶ್ರಿತ ನೆರೆ ನೀರಿನೊಂದಿಗೆ ಬೃಹತ್ ಮರಗಳು ಕೆಳ ಪ್ರದೇಶಗಳಿಗೆ ನುಗ್ಗಿದೆ. ಇದರಿಂದ ಚಾರ್ಮಾಡಿ ಹೊಸಮಠ ಸೇತುವೆ ಕುಸಿದಿದೆ. ಇದರಿಂದ ನೂರಾರು ಮನೆಗಳಿರುವ ಈ ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದ್ದು, ದ್ವೀಪದಂತಾಗಿದೆ.
ಸುಮಾರು 40 ಆದಿವಾಸಿ ಕುಟುಂಬಗಳು ಸೇರಿದಂತೆ 50ಕ್ಕೂ ಅಧಿಕ ಕುಟುಂಬಗಳಿರುವ ಪ್ರದೇಶವನ್ನು ಸಂಪರ್ಕಿಸುವ ಅನಾರು ಸೇತುವೆ ಸಂಪೂರ್ಣ ಕುಸಿದಿದೆ. ಇದರಿಂದ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಾರ್ಮಾಡಿಯಲ್ಲಿ ಸುಮಾರು ಹತ್ತು ಮನೆಗಳು ಕುಸಿದಿವೆ. ತಾಲೂಕಿನಾದ್ಯಂತ ಪ್ರವಾಹ ಸ್ಥಿತಿ ಮುಂದುವರಿದಿದ್ದು ವಿವಿಧೆಡೆ ಹಲವು ಮನೆಗಳಿಗೆ ನೀರು ನುಗ್ಗಿವೆ. ಕೆಲವು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.