×
Ad

ದೇಶದಲ್ಲಿ ಕಾರ್ಮಿಕರ ಸ್ಥಿತಿ ಇನ್ನಷ್ಟು ಸಂಕಷ್ಟದಲ್ಲಿ: ಅಮರಜೀತ್ ಕೌರ್ ಆತಂಕ

Update: 2019-08-10 14:08 IST

ಮಂಗಳೂರು, ಆ.10: ಕಾರ್ಮಿಕರ ಹಿತಾಸಕ್ತಿ ಕಡೆಗಣಿಸುವ ನೀತಿಯನ್ನು ದೇಶದಲ್ಲಿ ಸರಕಾರ ಅನುಸರಿಸುತ್ತಿರುವುದರಿಂದ 2014ರಿಂದ ಕಾರ್ಮಿಕರ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೀಡಾಗಿದೆ ಎಂದು ದೇಶದ ಹಿರಿಯ ಕಾರ್ಮಿಕ ನಾಯಕಿ ಅಮರಜೀತ್ ಕೌರ್ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣದ ಧುರೀಣ, ಬಿ.ವಿ.ಕಕ್ಕಿಲ್ಲಾಯರ ಜನ ಶತಾಬ್ದಿಯ ಪ್ರಯುಕ್ತ ಸಮದರ್ಶಿ ವೇದಿಕೆ ಮಂಗಳೂರು, ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ, ಹೊಸತು ಮಾಸ ಪತ್ರಿಕೆ ಮತ್ತು ನವಕರ್ನಾಟಕ ಪ್ರಕಾಶನ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣ ಸಹೋದಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ ಸಂವಿಧಾನದಲ್ಲಿ ಕಾರ್ಮಿಕರ ಸಂರಕ್ಷಣೆ ಗೆ ಸಾಕಷ್ಟು ಕಾನೂನುಗಳಿದ್ದರೂ ವಾಸ್ತವದಲ್ಲಿ ಈ ಕಾನೂನುಗಳ ಅನುಷ್ಠಾನಗೊಳ್ಳುತ್ತಿಲ್ಲ. 2014ರಿಂದ 2019ವರೆಗಿನ ಸರಕಾರದ ನೀತಿಯನ್ನು ಗಮನಿಸಿದರೆ ಸಂಸತ್ತಿನಲ್ಲೇ ಕಾರ್ಮಿಕರ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿರುವಂತೆ ಕಾಣುತ್ತಿದೆ. ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಸಂಬಂಧಿಸಿ ರೂಪಿಸುತ್ತಿರುವ ನೀತಿ ಕಾರ್ಮಿಕ ಸಾಮಾಜಿಕ ಭದ್ರತಾ ನೀತಿ, ಕಾರ್ಮಿಕರ ಕನಿಷ್ಠ ಕೂಲಿಗೆ ಸಂಬಂಧಿಸಿದ ನೀತಿ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧ ವಾಗಿದೆ ಎಂದರು.

ದೇಶದಲ್ಲಿ ಶೇ.95ರಷ್ಟು ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾ ಗಿದ್ದಾರೆ. ಸರಕಾರದ ಹಾಗೂ ಸಾರ್ವಜನಿಕ ವಲಯದ ಬಹುತೇಕ ಉದ್ಯೋಗ ಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಅವರು ಸರಕಾರಿ ಉದ್ಯೋಗಿಗಳ ಮೂರನೇ ಒಂದರಷ್ಟು ವೇತನವನ್ನು ಪಡೆಯಲು ಸಾದ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದವರು ತಿಳಿಸಿದರು.

ಎಐಟಿಯುಸಿ ದೇಶದಲ್ಲಿ ಪ್ರಥಮ ಬಾರಿಗೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಜೊತೆಗೆ ದೇಶದಲ್ಲಿ ಪ್ರಥಮ ಬಾರಿಗೆ ಮಾನವ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ ಸಂಘಟನೆಯಾಗಿದೆ. ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡ ಎಐಟಿಯುಸಿ ದೇಶದಲ್ಲಿ ಪ್ರಥಮ ಬಾರಿಗೆ 1921ರಲ್ಲಿ ಪೂರ್ಣ ಸ್ವಾತಂತ್ರ ಬೇಕು ಎಂದು ನಿರ್ಣಯ ಕೈಗೊಂಡು ಹೋರಾಟ ನಡೆಸಿದ ಸಂಘಟನೆ. ಎಂಟು ವರ್ಷದ ಬಳಿಕ ದೇಶ ಮುಂಚೂಣಿಯಲ್ಲಿ ಹೋರಾಟದಲ್ಲಿ ತೊಡಗಿದ್ದ ಸ್ವಾತಂತ್ರ ಹೋರಾಟಗಾರರು ಪೂರ್ಣ ಸ್ವರಾಜ್ಯದ ತೀರ್ಮಾನ ತೆಗೆದುಕೊಂಡರು. ದೇಶದಲ್ಲಿ ಕಾರ್ಮಿಕ ರಕ್ಷಣೆಯ ಕಾನೂನು ಹೋರಾಟದಿಂದ. ಈ ಹೋರಾಟ ಕಾರ್ಮಿಕರೆಲ್ಲರ ಸಂಘಟನೆಯೊಂದಿಗೆ ಮತ್ತೆ ಮುಂದುವರಿಸಬೇಕಾಗಿದೆ ಎಂದು ಅಮರ ಜೀತ್ ಹೇಳಿದರು.

ಕನ್ಹಯ್ಯ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News