ಶಿರಾಡಿ, ಚಾರ್ಮಾಡಿ ರಸ್ತೆ ಬಂದ್: ಬೆಂಗಳೂರಿನಿಂದ ಈ ದಾರಿಯಲ್ಲಿ ಬರಬಹುದು ಮಂಗಳೂರಿಗೆ
ಮಂಗಳೂರು, ಆ.10: ಭಾರೀ ಮಳೆ, ಪ್ರವಾಹ, ಭೂಕುಸಿತದಿಂದಾಗಿ ಬೆಂಗಳೂರಿ-ಮಂಗಳೂರು ಕಡೆಗೆ ಬರುವ ಬಹುತೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಕುದುರೆಮುಖ ಘಾಟ್ ಹಾಗೂ ಆಗುಂಬೆ ಘಾಟ್ ರಸ್ತೆಗಳು ಬಹುತೇಕ ಬ್ಲಾಕ್ ಆಗಿದೆ. ಆದ್ದರಿಂದ ಸದ್ಯಕ್ಕೆ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವವರಿಗೆ ಒಂದು ಮಾರ್ಗ ಇನ್ನೂ ತೆರೆದಿದೆ ಎಂದು 'ವಾರ್ತಾಭಾರತಿ'ಗೆ ಓದುಗರೊಬ್ಬರು ಮಾಹಿತಿ ನೀಡಿದ್ದಾರೆ .
ಬೆಂಗಳೂರಿನಿಂದ ಮಂಗಳೂರಿಗೆ ಶನಿವಾರ ಮಧ್ಯಾಹ್ನ ಖಾಸಗಿ ವಾಹನದಲ್ಲಿ ಬಂದು ತಲುಪಿರುವ ಮಂಗಳೂರಿನ ಸೈಫ್ ಸುಲ್ತಾನ್ ಅವರು ಹಾಸನದಿಂದ ಮುಂದಕ್ಕೆ ಬಾಳುಪೇಟೆ ಎಂಬ ಊರು ಸಿಗುತ್ತದೆ. ಅಲ್ಲಿ ಎಡಭಾಗಕ್ಕೆ ಸಂಚರಿಸಬೇಕು. ಅಲ್ಲಿಂದ ಬಿಸ್ಲೆ ಘಾಟ್ ಇಳಿದರೆ ಸುಬ್ರಹ್ಮಣ್ಯ ತಲುಪಬಹುದು. ಸುಬ್ರಹ್ಮಣ್ಯ ಮುಖ್ಯ ರಸ್ತೆಗೆ ಬರುತ್ತಿದ್ದಂತೆ ಎಡಕ್ಕೆ ತಿರುಗಿದರೆ ಉಪ್ಪಿನಂಗಡಿಗೆ ಬರುವ ರಸ್ತೆ ಸಿಗುತ್ತದೆ. ಆ ರಸ್ತೆ ಉಪ್ಪಿನಂಗಡಿ ನಗರವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಮಂಗಳೂರಿಗೆ ತಲುಪಬಹುದು ಎಂದು ಮಾಹಿತಿ ನೀಡಿದ್ದಾರೆ.
ಬಿಸ್ಲೆ ಘಾಟ್‌ನಲ್ಲಿ ಅಲ್ಲಲ್ಲಿ ಮರಗಳು ಉರುಳಿ ಬೀಳುತ್ತಿದ್ದು, ಸಣ್ಣಪುಟ್ಟ ಅಡೆತಡೆಗಳು ಉಂಟಾಗುತ್ತಿದೆ. ಆದರೂ ಶನಿವಾರ ಮಧ್ಯಾಹ್ನ 1 ಗಂಟೆಯವರೆಗೆ ಈ ರಸ್ತೆ ಯಾವುದೇ ಅಪಾಯಗಳಿಲ್ಲದೆ ವಾಹನ ಸಂಚಾರಕ್ಕೆ ಯೋಗ್ಯವಾಗಿತ್ತು ಎಂದು ಸೈಫ್ ಸುಲ್ತಾನ್ ಹೇಳಿದ್ದಾರೆ. ಉಳಿದೆಲ್ಲ ರಸ್ತೆಗಳು ಬಂದ್ ಆಗಿರುವುದರಿಂದ ಈ ರಸ್ತೆಯಲ್ಲೂ ಹೆಚ್ಚು ವಾಹನಗಳ ಸಂಚಾರ ಇರುವ ಸಾಧ್ಯತೆ ಇದೆ. ಜೊತೆಗೆ ಈ ರಸ್ತೆಯಲ್ಲೂ ಯಾವುದೇ ಸಂದರ್ಭದಲ್ಲಿ ಭೂಕುಸಿತ, ಮರಗಳು ಉರುಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹಾಗಾಗಿ ತೀರಾ ತುರ್ತು ಅಥವಾ ಅನಿವಾರ್ಯತೆ ಇಲ್ಲದಿದ್ದರೆ ಈ ಸಂದರ್ಭದಲ್ಲಿ ಪ್ರಯಾಣಿಸದೆ ಇರುವುದೇ ಉತ್ತಮ.