ಅನಂತ್‌ನಾಗ್‌: ಜಾನುವಾರು ವ್ಯಾಪಾರಿಗಳೊಂದಿಗೆ ಅಜಿತ್ ದೋವಲ್ ಸಂವಾದ

Update: 2019-08-10 14:14 GMT

ಜಮ್ಮು, ಆ.10: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅಲ್ಲಿನ ಜನರನ್ನು ಭೇಟಿಯಾಗಿ ಅವರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಜಮ್ಮು ಕಾಶ್ಮೀರದಲ್ಲಿ ಪ್ರವಾಸ ಮಾಡುತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಅನಂತ್‌ನಾಗ್‌ಗೆ ಭೇಟಿ ನೀಡಿ ಅಲ್ಲಿ ಜಾನುವಾರು ವ್ಯಾಪಾರಿಗಳೊಂದಿಗೆ ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿದರು.

ಅನಂತ್‌ನಾಗ್‌ನಲ್ಲಿ ಈದ್ ಪ್ರಯುಕ್ತ ವ್ಯವಸ್ಥೆಗೊಳಿಸಲಾದ ಜಾನುವಾರು ಮಾರುಕಟ್ಟೆಗೆ ತೆರಳಿದ ದೋವಲ್ ಅಲ್ಲಿನ ವ್ಯಾಪಾರಿಗಳೊಂದಿಗೆ ಮಾಂಸದ ಬೆಲೆ, ಮಾಂಸದ ವಿಶೇಷತೆಯ ಬಗ್ಗೆ ವಿಚಾರಿಸಿದರು. ಇಲ್ಲಿ ಹೆಚ್ಚಾಗಿ ಕುರಿಯ ಮಾಂಸ ಮಾರಾಟ ಮಾಡಲಾಗುತ್ತಿತ್ತು. ಜಾನುವಾರನ್ನು ಕಾರ್ಗಿಲ್‌ನ ದ್ರಾಸ್‌ನಿಂದ ಖರೀದಿಸಿ ತಂದಿರುವುದಾಗಿ ದೋವಲ್‌ಗೆ ತಿಳಿಸಿದ ವ್ಯಾಪಾರಿಯೊಬ್ಬ ಬಳಿಕ ‘ದ್ರಾಸ್ ಎಲ್ಲಿದೆಯೆಂದು ಗೊತ್ತಿದೆಯೇ’ ಎಂದು ಪ್ರಶ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಸಂದರ್ಭ ಅನಂತ್‌ನಾಗ್‌ನ ಜಿಲ್ಲಾಧಿಕಾರಿ ಆ ವ್ಯಾಪಾರಿಯ ಬಳಿ ತೆರಳಿ- “ನೀನು ಪ್ರಶ್ನೆ ಕೇಳುತ್ತಿರುವ ವ್ಯಕ್ತಿ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್” ಎಂದಾಗ ದೋವಲ್ ನಗುತ್ತಾ ಆ ಯುವ ವ್ಯಾಪಾರಿಯ ಬೆನ್ನು ತಟ್ಟಿ ತಲೆಯಾಡಿಸುತ್ತಾ ಅಲ್ಲಿಂದ ತೆರಳಿದರು. ಶುಕ್ರವಾರ ಈದ್ಗಾ ಪ್ರದೇಶಕ್ಕೆ ಭೇಟಿ ನೀಡಿದ್ದ ದೋವಲ್ ಅಲ್ಲಿ ವಿವಿಧ ಸ್ಥಳಗಳಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News