×
Ad

‘ಗೆಳತಿ’ ವಿಶೇಷ ಚಿಕಿತ್ಸಾ ಘಟಕಕ್ಕೆ ಶ್ಯಾಮಲಾ ಕುಂದರ್ ಭೇಟಿ: ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ

Update: 2019-08-10 20:37 IST

ಉಡುಪಿ, ಆ.10: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಇಂದು ಉಡುಪಿ ನಗರದ ನಿಟ್ಟೂರಿನಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್ ಮತ್ತು ಸ್ಟೇಟ್ ಹೋಮ್ಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ಭೂತ ಸೌಕರ್ಯ ಮತ್ತು ಸವಲತ್ತುಗಳ ಬಗ್ಗೆ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಗೆಳತಿ ಸಹಾಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಇನ್ನೊಂದು ಪಾರ್ಶ್ವದಲ್ಲಿ ಎರಡನೆಯ ಮಹಡಿಯ ಕೊನೆಯಲ್ಲಿರುವ ಗೆಳತಿ ಕೇಂದ್ರವು ಆಸ್ಪತ್ರೆಯ ಪ್ರವೇಶ ದ್ವಾರದಿಂದ ಬಹಳ ದೂರದಲ್ಲಿದ್ದು, ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದನ್ನು ಗಮನಿಸಿದ ಶ್ಯಾಮಲಾ ಕುಂದರ್, ಇಂತಹ ಅವ್ಯವಸ್ಥೆಯಿಂದ ಈ ಗೆಳತಿ ಕೇಂದ್ರದ ಮಾಹಿತಿಯು ಬಹುತೇಕ ಜನರಿಗೆ ತಿಳಿದಿಲ್ಲ ಎಂದರು.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು. ರಾಷ್ಟ್ರೀಯ ಮಹಿಳಾ ಆಯೋಗವು ನೂತನವಾಗಿ ದೇಶದಾದ್ಯಂತ ಪ್ರತಿ ಗ್ರಾಮದಲ್ಲಿ ಆಯೋಜಿಸಲಿರುವ ನಾರೀ ಅದಾಲತ್ ಕುರಿು ಅವರು ಮಾಹಿತಿಯನ್ನು ನೀಡಿದರು.

ಸಾಂತ್ವನ ಕೇಂದ್ರದ ಮೂಲಕ ನೀಡಲಾಗುತ್ತಿರುವ ಸೇವೆಗಳು, ಬಗೆಹರಿಸಲ್ಪಟ್ಟ ದೂರುಗಳು, ಕೆಡಿಪಿ ಸಭೆಗಳು, ಮಾತೃ ಪೂರ್ಣ, ಗೊಂಚಲು ಸಭೆ, ಪೋಕ್ಸೋ ಕಾಯ್ದೆ ಮತ್ತು ಬೇಟೀ ಬಚಾವೋ ಬೇಟೀ ಪಡಾವೋ ಅಭಿಯಾನ, ಮೊದಲಾದವುಗಳ ಕುರಿತು ಚರ್ಚೆ ನಡೆಸಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿರುವ ಗೆಳತಿ ಕೇಂದ್ರದ ಅವ್ಯವಸ್ಥೆಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಈ ಕೇಂದ್ರಕ್ಕೆ ಸೂಕ್ತವಾದ ಸ್ಥಳಾವಕಾಶವನ್ನು ಕಲ್ಪಿಸೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುವ ಮಹಿಳಾ ಕಾರ್ಮಿಕರ ಮತ್ತು ಅವರ ಮಕ್ಕಳ ಯೋಗಕ್ಷೇಮದ ಕುರಿತು ಮಾಹಿತಿಯನ್ನು ಪಡೆದ ಅವರು, ಕೇಂದ್ರ ಸರಕಾರದ ವತಿಯಿಂದ ನೀಡಲಾಗುತ್ತಿರುವ ಮಹಿಳಾ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಶಕ್ತೀಕರಣ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರವನ್ನು ಶೀಘ್ರದಲ್ಲಿ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೇಟೀ ಬಚಾವೋ ಬೇಟೀ ಪಡಾವೋ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರೊ.ಶ್ರೀನಾಥ್ ರಾವ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News